ಮೈಸೂರು : ಕುಮಾರಸ್ವಾಮಿ ನಡೆ, ದಳಪತಿಗಳ ಕುಟುಂಬ ರಾಜಕಾರಣದಿಂದ ಬೇಸತ್ತಿರುವ ಅನೇಕ ಜೆಡಿಎಸ್ ಶಾಸಕರು ಈಗಾಗಲೇ ಪಕ್ಷಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಇದೇ ಅವಕಾಶಕ್ಕಾಗಿ ಕಾಯುತ್ತಿರುವ ಕಾಂಗ್ರೆಸ್ ಕೂಡಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಜೆಡಿಎಸ್ ಶಾಸಕರು ಸೇರಿಸಿಕೊಂಡರೆ ಬಿಜೆಪಿಯನ್ನು ಸೋಲಿಸಬಹುದು ಅನ್ನುವುದು ಡಿಕೆಶಿ ಲೆಕ್ಕಚಾರ.
ಈ ನಡುವೆ ಜೆಡಿಎಸ್ ಪಕ್ಷದ ಭದ್ರಕೋಟೆ ಎಂದು ಕರೆಸಿಕೊಂಡಿರುವ ಮೈಸೂರು ಭಾಗದಲ್ಲಿ ಕಂಪನ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಜಿಟಿ ದೇವೇಗೌಡ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಕೆ.ಆರ್.ನಗರ ಶಾಸಕ ಸಾರಾ ಮಹೇಶ್ ಅವರ ಕೆಲವು ನಿರ್ಧಾರಗಳೇ ಜಿಟಿಡಿ ಪಕ್ಷ ತೊರೆಯಲು ಕಾರಣ ಎನ್ನಲಾಗಿದೆ. ಜೊತೆಗೆ ಕುಮಾರಸ್ವಾಮಿಯವರು ಕೂಡಾ ಪ್ರಮುಖ ನಿರ್ಧಾರ ಸಂದರ್ಭದಲ್ಲಿ ಜಿಟಿಡಿಯವರನ್ನು ಗಣನೆಗೆ ತೆಗೆದುಕೊಳ್ಳುತ್ತಿದೆ. ಸಾರಾ ಹೇಳಿದ್ದೇ ಅಂತಿಮವಾಗುತ್ತಿದೆಯಂತೆ.
ಮತ್ತೊಂದು ಕಡೆ ಪಿರಿಯಾಪಟ್ಟಣ ಶಾಸಕ ಕೆ.ಮಹಾದೇವು ಕೂಡಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಳ್ಳುವ ಸಾಧ್ಯತೆಗಳಿದೆಯಂತೆ. ಈ ಇಬ್ಬರೂ ಪಕ್ಷ ತೊರೆದರೆ ಕೆ.ಆರ್.ನಗರ ಶಾಸಕ ಸಾರಾ ಮಹೇಶ್ ಅವರೇ ಮೈಸೂರು ಭಾಗದ ದಳಪತಿಯಾಗ್ತಾರೆ.
ಆದರೆ ಇದೀಗ ರಂಗ ಪ್ರವೇಶ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರು ಈ ಮೂವರು ಶಾಸಕರಿಗೆ ಶಾಕ್ ಕೊಡಲು ಮುಂದಾಗಿದ್ದಾರೆ. ಜಿಟಿಡಿ ಪ್ರತಿನಿಧಿಸುತ್ತಿರುವ ಚಾಮುಂಡೇಶ್ವರಿಯಲ್ಲಿ ಭವಾನಿ ರೇವಣ್ಣ ಅವರನ್ನು ಮುಂದಿನ ಚುನಾವಣೆಯಲ್ಲಿ ಕಣಕ್ಕಳಿಸಲು ನಿರ್ಧರಿಸಿದ್ದಾರಂತೆ. ಭವಾನಿ ಇಲ್ಲಿ ಕಣಕ್ಕಿಳಿದರೆ ಮೈಸೂರು ಭಾಗದ ಒಕ್ಕಲಿಗ ಮತಗಳು ಓಡೆದು ಹೋಗುವುದಿಲ್ಲ, ಮೈಸೂರು ಭಾಗದ ಜನತೆಗೆ ಜೆಡಿಎಸ್ ಜೊತೆಗೊಂದು ಭಾವನಾತ್ಮಕ ಸಂಬಂಧವಿದ್ದು ಅದೂ ಕೂಡಾ ಉಳಿದುಕೊಳ್ಳುತ್ತದೆ. ಜೊತೆಗೆ ಜಿಟಿಡಿ ಕಾಂಗ್ರೆಸ್ ನಿಂದ ಕಣಕ್ಕಿಳಿದರೆ ಅವರಿಗೆ ಗೆಲುವು ಸುಲುಭವಾಗಿರೋದಿಲ್ಲ.
ಇನ್ನು ಭವಾನಿ ಎಂಟ್ರಿಯಿಂದ ಪಿರಿಯಾಪಟ್ಟಣದ ಮಹಾದೇವು ಅವರಿಗೆ ತಲೆನೋವು ಸೃಷ್ಟಿಯಾಗಲಿದೆ. ಪಿರಿಯಾಪಟ್ಟಣದಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ರಾಜಕೀಯ ಹಿಡಿತ ಹೊಂದಿದ್ದಾರೆ. ಇದೇ ಕಾರಣದಿಂದ ಕಳೆದ ಸಲ ಮಹಾದೇವು ಗೆಲುವು ಸುಲಭವಾಗಿತ್ತು. ಈ ಬಾರಿ ಭವಾನಿ ರೇವಣ್ಣ ಮೈಸೂರು ಕಡೆಗೆ ಬಂದರೆ ಮಹಾದೇವು ಅವರು ಕಾಂಗ್ರೆಸ್ ನಿಂದ ಗೆಲ್ಲುವುದು ಸುಲಭವಿಲ್ಲ.
ಇನ್ನು ಭವಾನಿ ರೇವಣ್ಣ ಚಾಮುಂಡೇಶ್ವರಿಗ ಎಂಟ್ರಿಯಿಂದ ದೊಡ್ಡ ಸಮಸ್ಯೆಯಾಗುವುದು ಕುಮಾರಸ್ವಾಮಿ ಆಪ್ತ ಸಾರಾ ಮಹೇಶ್ ಅವರಿಗೆ. ಹೇಳಿ ಕೇಳಿ ಕೆ.ಆರ್.ನಗರದ ಸಾಲಿಗ್ರಾಮ ಭವಾನಿಯವರ ತವರೂರು. ಈ ಹಿಂದೆಯೇ ಸಾರಾ ಅವರನ್ನು ಕೆಳಗಿಳಿಸಿ ಭವಾನಿಯವರು ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರು. ಅದು ಸಾಧ್ಯವಾಗಿರಲಿಲ್ಲ. ಜೊತೆಗೆ ಭವಾನಿ ರೇವಣ್ಣ ಹಾಗೂ ಸಾರಾ ಅವರ ನಡುವಿನ ರಾಜಕೀಯ ಸಂಬಂಧ ಅಷ್ಟಕಷ್ಟೇ ಇದೆ.
ಹೀಗಾಗಿ ಮೈಸೂರು ಭಾಗದಲ್ಲಿ ನಾನೇ ದಳಪತಿ, ನನ್ನದೇ ಫೈನಲ್ ಎಂದು ಓಡಾಡುತ್ತಿರುವ ಸಾರಾ ಅಬ್ಬರಕ್ಕೆ ಬ್ರೇಕ್ ಬೀಳಲಿದೆ. ದೇವೇಗೌಡರ ಕುಟುಂಬದ ಸದಸ್ಯರು ಬಂದ್ರೆ ಸಾರಾ ಅವರ ಆಟ ನಡೆಯೋದಿಲ್ಲ. ಭವಾನಿಯವರೇ ಈ ಭಾಗದಲ್ಲಿ ನಾಯಕಿಯಾಗ್ತಾರೆ. ಈ ಮೂಲಕ ಹಾಸನದಲ್ಲಿ ರಾಜಕೀಯ ಹಿಡಿತಹೊಂದಿರುವ ರೇವಣ್ಣ ಕುಟುಂಬ ಮೈಸೂರಿನಲ್ಲೂ ಹಿಡಿತ ಸಾಧಿಸಿದಂತಾಗುತ್ತದೆ.
ಒಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಒಂದು ಕಲ್ಲಿನಲ್ಲಿ ಮೂರು ಹಣ್ಣು ಉರುಳಿಸುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
Discussion about this post