ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಭಾನುವಾರ ಸಂಜೆಯಿಂದ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡುಗು, ಸಿಡಿಲು ಮತ್ತು ಗಾಳಿ ಸಹಿತ ಮಳೆ ಸುರಿದ ಪರಿಣಾಮ ಅನೇಕ ಏರಿಯಾಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶದ ಜನ ಸಂಪ್ರದಾಯ ಅನ್ನುವಂತೆ ಸರ್ಕಾರಕ್ಕೆ ಹಿಡಿ ಶಾಪ ಹಾಕಿದರು.
ರಾತ್ರಿ 7 ಗಂಟೆ ಸುಮಾರಿಗೆ ಬಿರುಸು ಪಡೆದುಕೊಂಡ ಮಳೆ ತಡರಾತ್ರಿವರೆಗೂ ಮುಂದುವರಿಯಿತು. ಇದರಿಂದ ಮೈಸೂರು ರಸ್ತೆಯ ಬ್ಯಾಟರಾಯನಪುರ ಸಮೀಪವಿರುವ ಗಣಪತಿ ನಗರದ ಎರಡನೇ ಅಡ್ಡ ರಸ್ತೆಯ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಮನೆ ಮಂದಿಯೆಲ್ಲಾ ರಾತ್ರಿ ಪೂರ್ತಿ ನೀರು ಹೊರ ಹಾಕುವುದರಲ್ಲೇ ಕಾಲ ಕಳೆದಿದ್ದಾರೆ. ಪ್ರಮೋದ ಲೇಔಟ್ನ ವಸತಿ ಸಮುಚ್ಚಯವೊಂದರ ನೆಲ ಮಹಡಿಗೆ ನೀರು ನುಗ್ಗಿದ್ದು, ಫ್ಲ್ಯಾಟ್ ಗಳ ಮಂದಿ ಲಾಕ್ ಆಗಿದ್ದಾರೆ.
ಇನ್ನುಳಿದಂತೆ ಶ್ರೀನಿವಾಸನಗರ, ಗಿರಿನಗರ, ಮಲ್ಲೇಶ್ವರ, ಶ್ರೀನಗರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ವಿಜಯನಗರ, ಯಶವಂತಪುರ, ಆರ್.ಟಿ.ನಗರ, ಹೊಸಕೆರೆಹಳ್ಳಿ, ಸಂಜಯನಗರ, ಇಂದಿರಾನಗರ, ಪೀಣ್ಯ, ಹೆಬ್ಬಾಳ, ಕೋರಮಂಗಲ, ಜೆ.ಪಿ.ನಗರ, ಎಂ.ಜಿ.ರಸ್ತೆ, ಎಚ್ಎಎಲ್, ಹೆಣ್ಣೂರು, ಎಚ್ಎಸ್ಆರ್ ಬಡಾವಣೆ, ಪುಟ್ಟೇನಹಳ್ಳಿ, ಕೆಂಗೇರಿ, ರಾಜರಾಜೇಶ್ವರಿ ನಗರ, ಜಯನಗರ, ಸದಾಶಿವನಗರ, ಶಾಂತಿನಗರ, ಹಲಸೂರು ಏರಿಯಾದಲ್ಲಿ ಮಳೆ ದೊಡ್ಡ ಮಟ್ಟದಲ್ಲಿ ಸಮಸ್ಯೆ ತಂದೊಡ್ಡಿದೆ.
ಇನ್ನು ಚರಂಡಿ ನಿರ್ವಹಣೆಯಲ್ಲಿ ಸರ್ಕಾರ ಎಡವಿದ ಪರಿಣಾಮ ರಸ್ತೆಗಳಲ್ಲಿ ನೀರು ತುಂಬಿದ್ದು, ಸೋಮವಾರ ಬೆಳಗ್ಗೆ ಕಚೇರಿಗೆ ಹೊರಟವರಿಗೆ ರಾಜ್ಯ ಸರ್ಕಾರದ ಕಡೆಯಿಂದ ಉಚಿತ ಅಭಿಷೇಕ ಸೇವೆ ನೆರವೇರಿದೆ.
Discussion about this post