ಬೆಂಗಳೂರು : ಕೊರೋನಾ ಸೋಂಕಿನ ಎರಡನೇ ಅಲೆ ಬರುತ್ತದೆ ಎಂದು ಗೊತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದ ಕರ್ಮಕ್ಕೆ ಜನ ಇಂದು ನರಳುವಂತಾಗಿದೆ. ಕೊರೋನಾ ಸೋಂಕಿನ ಮೊದಲ ಅಲೆಯಲ್ಲಾದ ಅನಾಹುತಗಳನ್ನು ಅರಿತಿದ್ದ ರಾಜ್ಯ ಸರ್ಕಾರ ಎರಡನೆ ಅಲೆಯ ಸಂದರ್ಭದಲ್ಲಿ ಅದನ್ನು ತಪ್ಪಿಸಬಹುದಿತ್ತು. ಆದರೆ ಮೊದಲ ಅಲೆ ಮುಕಾಯ್ತ ಕಾಣುತ್ತಿದ್ದಂತೆ ರಾಜ್ಯ ಸರ್ಕಾರ ಕೊರೋನಾ ಅನ್ನುವ ಸೋಂಕು ಬಂದೇ ಇಲ್ಲ ಅನ್ನುವಂತೆ ವರ್ತಿಸಿತ್ತು.
ಇದೀಗ ಎರಡನೇ ಅಲೆಯ ಅಬ್ಬರ ತೀವ್ರಗೊಂಡಿದ್ದು, ರಾಜ್ಯ ರಾಜಧಾನಿಯ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ಭಯವಾಗುತ್ತಿದೆ. ಬೆಂಗಳೂರಿನಲ್ಲಿ ನೆಲೆಯೂರಿರುವವರ ಸಂಬಂಧಿಕರು ಹಳ್ಳಿಯಲ್ಲಿ ಕೂತು ನಿದ್ದೆಗೆಡುವಂತಾಗಿದೆ.
ಈ ನಡುವೆ ರಾಜ್ಯದಲ್ಲಿ ಶನಿವಾರ ದಾಖಲೆಯ ಸೋಂಕಿತರು ಪತ್ತೆಯಾಗಿದ್ದು ಒಂದೇ ದಿನ 17 ಸಾವಿರ ಜನರಿಗೆ ಸೋಂಕು ತಗುಲಿದೆ. ಜೊತೆಗೆ ಸಾವಿನ ಸಂಖ್ಯೆ 80ಕ್ಕೆ ತಲುಪಿದೆ.
ಇನ್ನು ಬೆಂಗಳೂರಿನಲ್ಲಿ ಒಂದು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಚೀನಾವನ್ನು ಮೀರಿಸುವ ಆಸ್ಪತ್ರೆ ಕಟ್ಟಿಸುತ್ತೇವೆ ಅಂದವರು ಎಲ್ಲಿ ಹೋದರೋ ಗೊತ್ತಿಲ್ಲ. ಹೋಗ್ಲಿ ಕಷ್ಟ ಪಟ್ಟು ಬೆಡ್ ಸಿಕ್ಕರೆ ಐಸಿಯುಗಳ ಕೊರತೆಯಿಂದ ಯಮಪಾಶವನ್ನು ಎದುರು ನೋಡುವಂತಾಗಿದೆ. ಅದೃಷ್ಟ ಗಟ್ಟಿ ಇದ್ದವರಿಗೆ ಬೆಡ್ ಸಿಕ್ತು, ಐಸಿಯು ಸಿಕ್ತು ಅಂದುಕೊಂಡರೆ, ಪ್ರಾಣವಾಯು ಸಿಗುತ್ತಿಲ್ಲ. ರಾಜಧಾನಿಯ ಬಹುತೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಖಾಲಿಯಾಗಿದ್ದು, ಆಯುಷ್ಯ ಗಟ್ಟಿ ಇದ್ದವರು ಮಾತ್ರ ಬದುಕುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ಆಸ್ಪತ್ರೆಗಳಲ್ಲಿ ಎರಡು ದಿನಕ್ಕೆ ಸಾಕಾಗುವಷ್ಟು ಆಕ್ಸಿಜನ್ ಸ್ಟಾಕ್ ಇದೆ. ಅದು ಮುಗಿದರೆ, ಸಾಲು ಸಾಲು ಹೆಣಗಳು ಬಿದ್ದರೂ ಅಚ್ಚರಿ ಇಲ್ಲ.
ಕೊರೋನಾ ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲೂ ಹೀಗೆ ಬೆಡ್ ಕೊರತೆ ಎದುರಾಗಿತ್ತು, ಐಸಿಯುಗಳಿಲ್ಲದೆ ಸೋಂಕಿತರು ಪರದಾಡಿದ್ದರು. ಅಂಬ್ಯುಲೆನ್ಸ್ ಗಳಿಲ್ಲದೆ ಹಿಡಿ ಶಾಪ ಹಾಕಿದ್ದರು. ಆಕ್ಸಿಜನ್ ಸಿಗದೆ ಅದೆಷ್ಟೋ ಮಂದಿ ಮೃತಪಟ್ಟಿದ್ದರು. ಈಗ ಮತ್ತೆ ಎರಡನೇ ಅಲೆಯ ಅಬ್ಬರ ತೀವ್ರಗೊಂಡಿದೆ. ಮತ್ತೆ ಅದೇ ಮೊದಲ ಅಲೆಯ ಸಮಸ್ಯೆಗಳೇ ಕಾಣಿಸಿಕೊಂಡಿದೆ. ಕನಿಷ್ಟ ಪಕ್ಷ ಹೆಚ್ಚುವರಿ ಆಕ್ಸಿಜನ್ ಘಟಕ ತೆರೆಯುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬಹುದಿತ್ತು. ಆದರೆ ಅದ್ಯಾವುದನ್ನೂ ಮಾಡದ ಸರ್ಕಾರ ಇದೀಗ ಕೊರೋನಾ ಸೋಂಕಿನ ಎರಡನೆ ಅಲೆಯನ್ನು ಕಟ್ಟಿಹಾಕಲು ಹೊರಟಿದೆ.
Discussion about this post