ಬೆಂಗಳೂರು : ಟ್ರಾಫಿಕ್ ಸಿಗ್ನಲ್ ಬಿದ್ದ ತಕ್ಷಣ ಅಮ್ಮಾ.. ತಾಯಿ ಅನ್ನುವ ಆಕ್ರಂದನ ಕೇಳಿ ಬರುತ್ತದೆ. ಅಯ್ಯೋ ಪಾಪ ಅನ್ನಿಸಿಕೊಂಡ ಮಂದಿ ಕಾಸು ಕೊಡುತ್ತಾರೆ, ಮತ್ತೆ ಕೆಲವರು ಮುಂದೆ ಹೋಗಯ್ಯಾ ಎಂದು ಕೈ ಸನ್ನೆಯಲ್ಲೇ ಹೇಳುತ್ತಾರೆ. ಹಾಗೇ ನೋಡಿದರೆ ಭಿಕ್ಷಾಟನೆ ಕಾನೂನು ಪ್ರಕಾರ ಅಪರಾಧ. ಭಿಕ್ಷುಕರಿಗೆ ಹೊಸ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕೇಂದ್ರವೊಂದು ಕೆಲಸ ಮಾಡುತ್ತಿದೆ. ಆದರೆ ಅಧಿಕಾರಿಗಳ ಅಸಡ್ಡೆ ಹಾಗೂ ಆಳುವವರ ನಿರ್ಲಕ್ಷ್ಯದಿಂದ ಆ ಕೇಂದ್ರ ಇದ್ದು ಇಲ್ಲದಂತಿದೆ.
ಈ ನಡುವೆ ಬೆಂಗಳೂರಿನಲ್ಲಿ ನೆಲೆಸಿರುವ ರಾಜ್ಯದ ವಿವಿಧ ಕಡೆಯ ಯುವಕ/ಯುವತಿಯರು ಬೆಂಗಳೂರು ಹುಡುಗರು ಅನ್ನುವ ತಂಡ ಕಟ್ಟಿಕೊಂಡು ಭಿಕ್ಷಾಟನೆ ವಿರುದ್ಧ ಆಂದೋಲನ ಪ್ರಾರಂಭಿಸಿದ್ದಾರೆ. ಭಿಕ್ಷಾಟನೆ ನಿಲ್ಲಬೇಕಾದರೆ ನಗದು ರೂಪದಲ್ಲಿ ಭಿಕ್ಷೆ ಹಾಕುವ ಬುದ್ದಿ ಇರಬಾರದು ಅನ್ನುವುದು ಈ ತಂಡದ ನಿಲುವು. ಈ ಮನಸ್ಥಿತಿ ಎಲ್ಲರಲ್ಲೂ ಬೆಳೆದರೆ ಮುಂದೊಂದು ದಿನ ಭಿಕ್ಷಾಟನೆ ಮುಕ್ತ ಭಾರತ ಕಟ್ಟಬಹುದು ಅನ್ನುವುದು ಇವರ ಅಭಿಮತ.
ಈ ಸಲುವಾಗಿ ಬೆಂಗಳೂರಿನ ರಸ್ತೆಗಳಲ್ಲಿ ಪ್ಲೇ ಕಾರ್ಡ್ ಹಿಡಿದು ನಿಲ್ಲುವ ತಂಡದ ಸದಸ್ಯರು, ಭಿಕ್ಷುಕರಿಗೆ ಹಣ ಕೊಡುವುದರಿಂದ ಆಗಬಹುದಾದ ಅನಾಹುತವನ್ನು ವಿವರಿಸುತ್ತಾರೆ. ಭಿಕ್ಷಾಟನೆ ಅನ್ನುವುದು ದೊಡ್ಡ ದಂಧೆಯಾಗಿದ್ದು, ಭಿಕ್ಷಾಟನೆ ಸಲುವಾಗಿ ಮಕ್ಕಳು, ಮಹಿಳೆಯರು, ವೃದ್ಧರನ್ನು ಅಪಹರಿಸಲಾಗುತ್ತದೆ. ಸಾರ್ವಜನಿಕರಿಂದ ಹಣ ಬರುವುದು ನಿಂತರೆ ದಂಧೆಯೂ ನಿಲ್ಲುತ್ತದೆ. ಜೊತೆ ಈಗಾಗಲೇ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು Front line ಗೆ ತರಲು ಸರ್ಕಾರದ ಅನೇಕ ಯೋಜನೆಗಳು ಕೂಡಾ ಇದೆ ಹೀಗಾಗಿ ಭಿಕ್ಷೆ ಹಾಕೊದನ್ನ ನಿಲ್ಲಿಸಿ, ನಿಮ್ಮ ಮಕ್ಕಳು ಕಿಡ್ನಾಪ್ ಆಗೋದನ್ನ ತಡೆಯಿರಿ ಅನ್ನುವುದು ಇವರ ಮನವಿ.
ಯಾವುದೇ ರೀತಿಯ ಭಿಕ್ಷುಕನಾಗಿರಲಿ ಯಾವುದೇ ರೀತಿಯ ವ್ಯಕ್ತಿಯಾಗಿರಲಿ ಮಹಿಳೆ/ಪುರುಷ / ವಯಸ್ಸಾದವರು/ಅಂಗವಿಕಲ / ಮಗು ಭಿಕ್ಷೆ ಬೇಡುತ್ತಿದ್ದರೆ, ನಾವು ಹಣಕ್ಕೆ ಬದಲಾಗಿ ಆಹಾರ ಮತ್ತು ನೀರು ನೀಡೋಣ. ಇದರ ಪರಿಣಾಮವಾಗಿ, ರಾಷ್ಟ್ರೀಯ / ರಾಜ್ಯ ಮಟ್ಟದಲ್ಲಿ, ಭಿಕ್ಷುಕರ ಗ್ಯಾಂಗ್‌ಗಳು ಒಡೆಯುತ್ತವೆ ಮತ್ತು ಮಕ್ಕಳ, ಹೆಂಗಸರ ಹಾಗೂ ವೃದ್ಧರ ಅಪಹರಣವು ನಿಲ್ಲುತ್ತದೆ. ಇದರಿಂದ ಇಂತಹ ಗ್ಯಾಂಗ್‌ಗಳು ಅಪರಾಧ ಜಗತ್ತಿನಲ್ಲಿ ಕೊನೆಗೊಳ್ಳುತ್ತವೆ. ಈ ಸಲುವಾಗಿ ಕಾರಿನಲ್ಲಿ 2 ಬಿಸ್ಕೆಟ್ ಪ್ಯಾಕೆಟ್‌ಗಳು ಇರಲಿ ಅಥವಾ ಏನಾದರೂ ಕೊಡಿ. ಆದರೆ ಹಣವನ್ನು ಕೊಡಬೇಡಿ ಅನ್ನುವುದು ಈ ತಂಡದ ಕಳಕಳಿಯ ಪ್ರಾರ್ಥನೆ.
Discussion about this post