ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡಲೆ ಅಲೆಯ ರುದ್ರ ನರ್ತನ ಶುರುವಾಗಿದೆ. ಕರಾಳ ಮುಖವನ್ನು ತೋರಿಸಲಾರಂಭಿಸಿರುವ ಕೊರೋನಾ ಸೋಂಕು ಬೆಂಗಳೂರನ್ನು ಸಾವಿನೂರನ್ನಾಗಿಸಿದೆ. ಕೆಲ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ.
ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಇನ್ನೂ ಮೀನಾ ಮೇಷ ಎಣಿಸುತ್ತಿದೆ. ಇಷ್ಟು ಹೊತ್ತಿಗೆ ಶಾಲಾ ಕಾಲೇಜು, ದೊಡ್ಡ ದೊಡ್ಡ ಶಾಪಿಂಗ್ ಮೇಳ, ರಾಜಕೀಯ ಸಮಾವೇಶ, ಜಾತ್ರೆಗಳಿಗೆ ಬ್ರೇಕ್ ಬೀಳಬೇಕಾಗಿತ್ತು. ಆದರೆ ಯಡಿಯೂರಪ್ಪ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ. ಬಂದಿರುವುದು ಕೇವಲ 14 ಸಾವಿರ ಕೇಸ್, ಇನ್ನೊಂದಿಷ್ಟು ನಂಬರ್ ಹೆಚ್ಚಾಗ್ಲಿ ಬಿಡಿ ಅನ್ನುವಂತಿದೆ ಅವರ ವರ್ತನೆ. ನಿಜಕ್ಕೂ ರಾಜ್ಯ ಸರ್ಕಾರಕ್ಕೆ ಕಾಳಜಿ ಇರುತ್ತಿದ್ರೆ ಮೊದಲ ಅಲೆಯಿಂದ ಪಾಠ ಕಲಿಯಬೇಕಾಗಿತ್ತು. ಎರಡನೆ ಅಲೆ ಬರಲಿದೆ ಅನ್ನುವುದು ಗೊತ್ತಾದ ಮೇಲೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಆದರೆ ಈಗ ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಕೆಲಸ ಪ್ರಾರಂಭವಾಗಿದೆ.
ಇನ್ನು ಬೆಂಗಳೂರಿನಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ತೀವ್ರವಾಗಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ಸಿಗುವುದು ಒಂದೇ ಉತ್ತರ, ನೋ ಬೆಡ್. ಸರ್ಕಾರ ಮಾತ್ರ ಬೆಡ್ ಗಳ ಕೊರತೆ ಇಲ್ಲ ಅನ್ನುತ್ತಿದೆ. ವಾಸ್ತವ ಮಾತ್ರ ಬೇರೆಯದ್ದೇ ಆಗಿದೆ.
ಇನ್ನು ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸತ್ತರೂ ಆತ್ಮಕ್ಕೆ ಮೋಕ್ಷ ಸಿಗದ ಪರಿಸ್ಥಿತಿ. ಸ್ಮಶಾನಗಳಲ್ಲಿ ಹೆಣ ಸುಡಲು ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದ್ದು, ಸರ್ಕಾರ ಅಂಬ್ಯುಲೆನ್ಸ್ ಕೊರತೆ ಇಲ್ಲ, ಣ ಸುಡಲು ಸಕಲ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ ಎಂದು ಕಥೆ ಹೇಳುತ್ತಿದೆ.
ಇದು ಕೊರೋನಾ ಸೋಂಕಿತರ ಕಥೆಯಾದರೆ, ನಾನ್ ಕೋವಿಡ್ ರೋಗಿಗಳನ್ನು ಮತ್ತೊಂದು ಕಥೆ. ಅದ್ಯಾವ ಎಮರ್ಜೆನ್ಸಿ ಎಂದು ಹೋದರೂ ಕೊರೋನಾ ಸೋಂಕಿನ ನೆಪವೊಡ್ಡಿ ನಾನ್ ಕೋವಿಡ್ ರೋಗಿಗಳನ್ನು ಆಡ್ಮಿಶನ್ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಅವರು ಕೂಡಾ ನರಳುವಂತಾಗಿದೆ. ರಾಜ್ಯ ಸರ್ಕಾರ ಇಂದು ನಾಳೆಯೊಳಗೆ ಎಚ್ಚೆತ್ತುಕೊಳ್ಳದಿದ್ರೆ ಕರ್ನಾಟಕ ಮಹಾಗಂಡಾಂತರ ಕಾದಿದೆ ಅನ್ನುವುದು ಸ್ಪಷ್ಟ. ಮಾತ್ರವಲ್ಲದೆ ಸರ್ಕಾರ ಆದೇಶ ಹೊರಡಿಸುವ ತನಕ ಬಿಂದಾಸ್ ಆಗಿರೋಣ ಅಂದುಕೊಂಡ್ರೆ ಖಂಡಿತಾ ತಪ್ಪಾಗುತ್ತದೆ. ಬದುಕಬೇಕು ಅನ್ನುವ ಆಸೆ ಇದ್ರೆ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಬಳಸಿಕೊಳ್ಳುವುದು ಉತ್ತಮ.
Discussion about this post