ಬೆಂಗಳೂರು : ಅತೀ ಹೆಚ್ಚು ಕೊರೋನಾ ಲಸಿಕೆ ವಿತರಿಸಿದ ನಗರಗಳ ಪಟ್ಟಿಯಲ್ಲಿರುವ ಬೆಂಗಳೂರಿನಲ್ಲಿ ಇನ್ನು ಮುಂದೆ ದಿನದ 24 ಗಂಟೆಯೂ ಲಸಿಕೆ ಲಭ್ಯವಿರಲಿದೆ. ಬಿಬಿಎಂಪಿ ಇಂತಹುದೊಂದು ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ಆಯ್ದ ಲಸಿಕಾ ಕೇಂದ್ರಗಳಲ್ಲಿ ದಿನದ 24 ಗಂಟೆ ಕೊರೋನಾ ಲಸಿಕೆ ಸಿಗಲಿದೆ.
BBMP 8 ವಲಯಗಳಲ್ಲಿ ತಲಾ ಒಂದು ಸರ್ಕಾರಿ ಲಸಿಕಾ ಕೇಂದ್ರ ದಿನದ 24 ಗಂಟೆಯೂ ತೆರೆದಿರಲಿದ್ದು, ಈ ಮೂಲಕ ಜನ ಲಸಿಕೆಗಾಗಿ ಕ್ಯೂ ನಿಲ್ಲುವುದನ್ನು ತಪ್ಪಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಬೆಂಗಳೂರಿನ ಪ್ರತಿ ಕೊಳಗೇರಿ, ದಿನಗೂಲಿ ಕಾರ್ಮಿಕರ ವಾಸಸ್ಥಳ ಮತ್ತು ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ರಾತ್ರಿ 8 ಗಂಟೆ ತನಕ ಕೊರೋನಾ ಲಸಿಕೆ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಇನ್ನು ಪ್ರತೀ ದಿನ 90 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿಯನ್ನು ಬಿಬಿಎಂಪಿ ಹೊಂದಿದ್ದು, ಈ ಮೂಲಕ ಮೂರನೇ ಅಲೆಯ ಸಂಭಾವ್ಯ ಅಪಾಯವನ್ನು ತಪ್ಪಿಸಲು ಮುಂದಾಗಿದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಲಸಿಕೆ ಲಭ್ಯವಿದ್ದರೆ ಲಸಿಕೆಯ ಅವಧಿ ಮುಗಿದ ಬಳಿಕವೂ ಸಾಲಿನಲ್ಲಿ ನಿಂತವರನ್ನು ನಾಳೆ ಬನ್ನಿ ಎಂದು ಹಿಂದಕ್ಕೆ ಕಳುಹಿಸುವುದಿಲ್ಲ. ಬದಲಾಗಿ ಸರತಿ ಸಾಲಿನಲ್ಲಿ ನಿಂತವರಿಗೆ ಮರು ದಿನದ ಲಸಿಕೆಯ ಟೋಕನ್ ನೀಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.
Discussion about this post