ಬೆಂಗಳೂರು : ರಾಜ್ಯ ಸರ್ಕಾರದ ಆಮೆನಡಿಗೆಯ ಕಾರಣದಿಂದ ಬೆಂಗಳೂರಿನಲ್ಲಿ ಕೊರೋನಾ ಸೋಂಕು ತೀವ್ರವಾಗಿ ಉಲ್ಭಣಿಸಿದೆ. ರಾಜ್ಯ ರಾಜಧಾನಿ ಕಳೆದ ಕೆಲ ದಿನಗಳಿಂದ ಸಾವಿನೂರಾಗಿದ್ದು ಇನ್ನೂ ಎಚ್ಚೆತ್ತುಕೊಳ್ಳದಿದ್ರೆ ಸ್ಮಶಾನಗಳೇ ಸಾಕಾಗದು.
ಕೊರೋನಾ ಸೋಂಕಿನ ಮೊದಲ ಅಲೆ ಕಡಿಮೆಯಾಗುತ್ತಿದ್ದಂತೆ ಕಠಿಣ ಕ್ರಮಗಳನ್ನು ಕೈಗೊಂಡಿರುತ್ತಿದ್ರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಆಗ ರಾಜ್ಯ ಸರ್ಕಾರ ಚುನಾವಣೆಯ ಕಾರ್ಯದಲ್ಲಿ ಮುಳುಗಿತ್ತು. ಇದೀಗ ಕೊರೋನಾ ಸೋಂಕಿನಿಂದ ಕರ್ನಾಟಕ ಮುಳುಗುತ್ತಿದೆ.
ಈ ನಡುವೆ ಕೊರೋನಾ ಸೋಂಕಿನಿಂದ ಬೆಂಗಳೂರನ್ನು ರಕ್ಷಿಸಲು ಯುದ್ದೋಪಾದಿಯ ಕ್ರಮಗಳನ್ನು ಕೈಗೊಳ್ಳುವಂತೆ ತಜ್ಞರು ಸಲಹೆಗಳನ್ನು ಕೊಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ ಎಂದಿನಂತೆ ನಿಧಾನಗತಿಯಲ್ಲಿ ನಡೆಯುತ್ತಿದೆ. ನಾಳೆ ಬೆಂಗಳೂರಿನ ಸಚಿವರ, ಶಾಸಕರ ಸಭೆಯ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಅನ್ನುವ ಭರವಸೆ ನೀಡಲಾಗಿದೆ. ಅಷ್ಟು ಹೊತ್ತಿಗೆ ಮತ್ತೆಷ್ಟು ಮಂದಿಗೆ ಸೋಂಕು ತಗುಲುತ್ತದೋ ಗೊತ್ತಿಲ್ಲ.
ಈ ನಡುವೆ ಬೆಂಗಳೂರು ಲಾಕ್ ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಬಯಲಾಗಿದೆ. ಇಂದು ಮಾತನಾಡಿದ ಆರ್ ಅಶೋಕ್, ಲಾಕ್ ಡೌನ್ ಖಂಡಿತಾ ಇಲ್ಲ, ನಾವು ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡೋದಿಲ್ಲ. ಮುಖ್ಯಮಂತ್ರಿಗಳ ಜೊತೆಗೆ ಈಗಾಗಲೇ ಕಂದಾಯ ಸಚಿವನಾಗಿ ಮಾತನಾಡಿದ್ದೇನೆ. ಲಾಕ್ ಡೌನ್ ಇಲ್ಲ…ಇಲ್ಲ..ಇಲ್ಲ ಅಂದಿದ್ದಾರೆ. ಕಳೆದ ಬಾರಿ ಲಾಕ್ ಡೌನ್ ಆದ ಸಂದರ್ಭದಲ್ಲಿ ಬಸ್ ನಿಲ್ದಾಣಗಳಲ್ಲಿ ಜನ ಪಟ್ಟ ಪಾಡು ನೋಡಿದ್ದೇವೆ. ರೈಲ್ವೆ ನಿಲ್ದಾಣಗಳಲ್ಲಿ ಪರಿಸ್ಥಿತಿ ಏನಾಗಿತ್ತು ಅನ್ನುವುದು ಗೊತ್ತಿದೆ. ಹೀಗಾಗಿ ಮತ್ತೆ ಲಾಕ್ ಡೌನ್ ಮಾಡಿದ್ರೆ ಅದೇ ಪರಿಸ್ಥಿತಿ ಎದುರಾಗುತ್ತದೆ. ಜೊತೆಗೆ ಸೋಂಕು ಮತ್ತಷ್ಟು ವ್ಯಾಪಕವಾಗಿ ಹರಡುವ ಸಾಧ್ಯತೆಗಳಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಇಲ್ಲ, ಆದರೆ ಕಠಿಣ ಕ್ರಮ ಗ್ಯಾರಂಟಿ ಅಂದಿದ್ದಾರೆ.
ಮತ್ತೊಂದು ಕಡೆ ಸಚಿವ ಸುಧಾಕರ್ ಲಾಕ್ ಡೌನ್ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ಬೆಂಗಳೂರಿನ ಪರಿಸ್ಥಿತಿ ಕೈಮೀರಿ ಹೋಗಿದೆ ಅನ್ನುವುದನ್ನು ಒಪ್ಪಿಕೊಂಡಿರುವ ಆರೋಗ್ಯ ಸಚಿವರು ರಾಜಧಾನಿಗೆ ಕಠಿಣ ಕ್ರಮಗಳನ್ನು ಅನಿವಾರ್ಯ ಎಂದು ಒತ್ತಿ ಹೇಳಿದ್ದಾರೆ. ಲಾಕ್ ಡೌನ್ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆಗಳನ್ನು ನಡೆಸಲಾಗಿದೆ ಅಂದಿದ್ದಾರೆ.
Discussion about this post