ಬೆಂಗಳೂರು : ರಾಜಧಾನಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಕಾಳಜಿ ವಹಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಅಪಘಾತದ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ಬಹುತೇಕ ಅಪಘಾತಗಳಿಗೆ ಅತೀ ವೇಗವೇ ಕಾರಣ ಎಂದು ಗೊತ್ತಾಗಿದ್ದು, ಕೆಲವೇ ಕೆಲವು ಪ್ರಕರಣಗಳು ಇನ್ನಿತರ ಕಾರಣಗಳಿಗೆ ನಡೆದಿದೆ. ಹೀಗಾಗಿ ಅತೀ ವೇಗದ ಬಗ್ಗೆ ಕ್ರಮಕ್ಕೆ ಮುಂದಾಗಿರುವ ಬೆಂಗಳೂರು ಪೊಲೀಸರು ಅಟೋ ಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮರ ( ANPR ) ಮೊರೆ ಹೋಗಿದ್ದಾರೆ.
ಡಿಸೆಂಬರ್ ತಿಂಗಳೊಂದರಲ್ಲಿ 22 ಅಪಘಾತ ಈ ರಸ್ತೆಯಲ್ಲಿ ಸಂಭವಿಸಿದ್ದು 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಸಂಬಂಧ NHAI ಅಧಿಕಾರಿಗಳಿಗೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಪತ್ರ ಬರೆದಿದ್ದು, ಹೆಬ್ಬಾಳ ಫ್ಲೈ ಓವರ್ ನಿಂದ ಸಾದಹಳ್ಳಿ ಗೇಟ್ ತನಕ 12 ANPR ಕ್ಯಾಮರಾ ಅಳವಡಿಸುವತೆ ಪ್ರಸ್ತಾಪಿಸಿದ್ದಾರೆ.
ಈ ಕ್ಯಾಮರಾ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕ್ಯಾಮರಾವಾಗಿದ್ದು, ಅದೆಷ್ಟೇ ವೇಗದಲ್ಲಿ ವಾಹನ ಚಲಿಸಿದರೂ, ಅದನ್ನು ಗುರುತಿಸಿ ನಂಬರ್ ಪ್ಲೇಟ್ ಅನ್ನು ಸೆರೆ ಹಿಡಿಯುತ್ತದೆ. ಇದಾದ ಬಳಿಕ ಪೊಲೀಸರಿಗೆ ನೋಟೀಸ್ ಜಾರಿ ಮಾಡಲು ಅನುಕೂಲವಾಗುತ್ತದೆ.
ಹಾಗೇ ನೋಡಿದರೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಗರಿಷ್ಠ ವೇಗದ ಮಿತಿ ಗಂಟೆಗೆ 80 ಕಿಮೀ, ಆದ್ಯಾವ ವಾಹನಗಳು ಈ ಮಿತಿಯ ವೇಗದಲ್ಲಿ ಚಲಿಸುತ್ತದೆ ಹೇಳಿ.
Discussion about this post