ಬೆಂಗಳೂರು : ರಾಜ್ಯ ರಾಜಧಾನಿಯ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾರಂಭವಾದ ನಮ್ಮ ಮೆಟ್ರೋ ಇದೀಗ 10 ವರ್ಷಗಳನ್ನು ಪೂರೈಸಿದೆ. 2011 ರ ಅಕ್ಟೋಬರ್ 20ರಂದು MG ರಸ್ತೆಯಿಂದ ಬೈಯ್ಯಪ್ಪನಹಳ್ಳಿ ತನಕದ 6 ಕಿಮೀ ದೂರವನ್ನು ಕ್ರಮಿಸುವ ಮೂಲಕ ಬೆಂಗಳೂರಿನಲ್ಲಿ ಮೊದಲ ಸಲ ಮೆಟ್ರೋ ಸಂಚಾರ ಪ್ರಾರಂಭವಾಗಿತ್ತು.
10 ವರ್ಷಗಳ ಅವಧಿಯಲ್ಲಿ ನಮ್ಮ ಮೆಟ್ರೋ 56 ಕಿ.ಮೀ. ಸಂಚಾರ ನಡೆಸುತ್ತಿದೆ. ಇದನ್ನು 175 ಕಿ.ಮೀ.ಗೆ ವಿಸ್ತರಿಸಲು ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಅಂದುಕೊಂಡಂತೆ ನಡೆದರೆ ಬೆಂಗಳೂರಿನ ರಸ್ತೆಗಳು ನಿಟ್ಟುಸಿರು ಬಿಡಲಿದೆ.
2024ರ ಡಿಸೆಂಬರ್ ವೇಳೆಗೆ 175 ಕಿ.ಮೀ. ಪೂರ್ಣಗೊಳಿಸುವ ಗುರಿಯನ್ನು ನಮ್ಮ ಮೆಟ್ರೋ ಹೊಂದಿದ್ದು, ಬಳಿಕ ಮೂರನೇ ಹಂತದ ಯೋಜನೆ ಪ್ರಾರಂಭಗೊಳ್ಳಲಿದೆ.
ಇನ್ನು 10 ವರ್ಷಗಳ ಅವಧಿಯಲ್ಲಿ 60 ಕೋಟಿ ಜನರನ್ನು ಸಾಗಿಸಿದ ಹಿರಿಮೆ ನಮ್ಮ ಮೆಟ್ರೋಗೆ ಸೇರಿದೆ. ಕೊರೋನಾ ಸೋಂಕಿಗೂ ಮುನ್ನ ನಿತ್ಯ ನಮ್ಮ ಮೆಟ್ರೋದಲ್ಲಿ 5.26 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಈಗ ಈ ಸಂಖ್ಯೆ 2.12 ಲಕ್ಷಗೆ ಕುಸಿದಿದೆ.
Discussion about this post