ವಿಶೇಷ ಕಾರ್ಯಾಚರಣೆಯೊಂದರಲ್ಲಿ ತಮಿಳುನಾಡು ಸಿಐಡಿ ಪೊಲೀಸರು ಸಾವಿರ ವರ್ಷಗಳಷ್ಟು ಹಳೆಯದು ಎನ್ನಲಾದ ಪಚ್ಚೆ ಶಿವಲಿಂಗವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು ಈ ಶಿವಲಿಂಗದ ಮೌಲ್ಯ 500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ತಂಜಾವೂರಿನ ಮನೆಯೊಂದರಲ್ಲಿ ವಿಗ್ರಹಗಳ ಅಕ್ರಮ ಮಾರಾಟ ನಡೆಯುತ್ತಿದೆ ಅನ್ನೋ ಖಚಿತ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಕಲ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ಎನ್.ಎಸ್. ಅರುಣ್ ಎಂಬಾತನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ದುಬಾರಿ ಶಿವಲಿಂಗವೊಂದು ಬ್ಯಾಂಕ್ ಲಾಕರ್ ನಲ್ಲಿ ಇರೋ ಮಾಹಿತಿ ಸಿಕ್ಕಿದೆ.
ಶಿವಲಿಂಗವನ್ನು ತಂಜಾವೂರಿನ ಬ್ಯಾಂಕ್ ಲಾಕರ್ನಲ್ಲಿ ಇಡಲಾಗಿದೆ ಅನ್ನೋ ಮಾಹಿತಿ ಹಿನ್ನಲೆಯಲ್ಲಿ ಕಾನೂನು ಕ್ರಮ ಕೈಗೊಂಡ ಪೊಲೀಸರು ಇದೀಗ ಶಿವಲಿಂಗವನ್ನು ವಶಕ್ಕೆ ಪಡೆದಿದ್ದಾರೆ. ಈ ಲಿಂಗ 350 ಗ್ರಾಂ ತೂಕವಿದ್ದು, 8 ಸೆಂ.ಮೀ ಎತ್ತರವಿದೆ. ಪಚ್ಚೆ ಶಿವಲಿಂಗದ ಮೌಲ್ಯ 500 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು ಇದು ಯಾವ ದೇವಸ್ಥಾನಕ್ಕೆ ಸೇರಿದ್ದು ಅನ್ನೋ ಮಾಹಿತಿ ತಿಳಿದು ಬಂದಿಲ್ಲ ಅಂದಿರುವ ಅಧಿಕಾರಿಗಳು 2016ರಲ್ಲಿ ನಾಗಪಟ್ಟಣಂ ಜಿಲ್ಲೆಯ ಬ್ರಹ್ಮಪುರೇಶ್ವರ ದೇವಾಲಯದಲ್ಲಿನ ಪಚ್ಚೆ ಶಿವಲಿಂಗ ನಾಪತ್ತೆಯಾಗಿರುವ ಮಾಹಿತಿ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ ಅಂದಿದ್ದಾರೆ.
Discussion about this post