ಕಾರು ಡಿಕ್ಕಿಯಾದ ಸಂದರ್ಭದಲ್ಲಿ ಮಾಧ್ಯಮ ಮಂದಿಯೂ ರಚಿತಾ ರಾಮ್ ಅವರ ಗಮನ ಸೆಳೆಯುವ ಕೆಲಸ ಮಾಡಿರಲಿಲ್ಲ ಅನ್ನೋದು ಗಮನಾರ್ಹ
ನನ್ನ ಕಾರು ಸಿಬ್ಬಂದಿಗೆ ಡಿಕ್ಕಿ ಹೊಡೆದಿದ್ದು ನನ್ನ ಗಮನಕ್ಕೆ ಬಂದಿಲ್ಲ. ಇದು ಆಕಸ್ಮಿಕವಾಗಿ ನಡೆದ ಘಟನೆ, ವಿಷಯ ಅರಿವಿಗೆ ಬಂದ ತಕ್ಷಣ ತಪ್ಪಿನ ಅರಿವಾಗಿದೆ ಎಂದು ನಟಿ ರಚಿತಾ ರಾಮ್ ಕ್ಷಮೆ ಕೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಲಾಲ್ ಬಾಗ್ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ನಟಿ ರಚಿತಾ ರಾಮ್ ಸೋಮವಾರ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಟಿ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ತಾಗಿತ್ತು.
ಈ ಘಟನೆಯ ವೀಡಿಯೊ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬಳಿಕ ಇದೀಗ ಪೌರ ಕಾರ್ಮಿಕರನ್ನು ಮನೆಗೆ ಆಹ್ವಾನಿಸಿ ಕ್ಷಮೆ ಕೇಳಿದ್ದಾರೆ.
ʼʼನಾನು ಲಾಲ್ಬಾಗ್ ಕಾರ್ಯಕ್ರಮಕ್ಕೆಂದು ತೆರಳಿದ್ದ ವೇಳೆ ಆಕಸ್ಮಿಕವಾಗಿ ನನ್ನ ಕಾರು ಅಲ್ಲಿ ಕೆಲಸ ಮಾಡುತ್ತಿದ್ದ ಸ್ವಚ್ಛತಾ ಕಾರ್ಮಿಕರಿಗೆ ತಾಗಿದೆ. ನನ್ನ ಹಾಗೂ ನನ್ನ ಕಾರು ಚಾಲಕನ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ. ಇದು ನಿನ್ನೆ ನನ್ನ ಗಮನಕ್ಕೆ ಬಂದಿರಲಿಲ್ಲ. ಇಲ್ಲವಾದ್ರೆ ನಿನ್ನೆಯೇ ನಾನು ಕ್ಷಮೆ ಕೇಳುತ್ತಿದ್ದೆ. ಅಲ್ಲಿಯೇ ಇದ್ದ ಮಾಧ್ಯಮ ಸ್ನೇಹಿತರು ಕೂಡ ನನ್ನ ಗಮನಕ್ಕೆ ತಂದಿರಲಿಲ್ಲ. ಏನಿದ್ದರೂ ಅದು ನನ್ನ ಮತ್ತು ನನ್ನ ಕಾರು ಚಾಲಕನ ತಪ್ಪು, ಈಗ ಸಿಬ್ಬಂದಿಯನ್ನು ಮನೆಗೆ ಕರೆದು ನಾನೇ ಅವರ ಬಳಿ ಕ್ಷಮೆ ಕೇಳಿದ್ದೇನೆʼʼ ಎಂದು ನಟಿ ರಚಿತಾ ರಾಮ್ ಇನ್ಸ್ಟಾಗ್ರಾಮ್ ನಲ್ಲಿ ಪೌರ ಕಾರ್ಮಿಕನ ಜೊತೆ ಮಾತನಾಡಿರುವ ವೀಡಿಯೊ ಪೋಸ್ಟ್ ಮಾಡಿದ್ದಾರೆ.
Discussion about this post