ಹುಬ್ಬಳ್ಳಿ : ಎಲ್ಲವೂ ಅಂದುಕೊಂಡ ಹಾಗೇ ನಡೆದಿದ್ರೆ ನಾಳೆ ( ಗುರುವಾರ ) ಆತ ಹಸಮಣೆ ಏರಬೇಕಾಗಿತ್ತು. ಆರೆ ಇದೀಗ ಮಾಡಿದ ಖತರ್ನಾಕ್ ಕೆಲಸದ ಕಾರಣದಿಂದ ಜೈಲು ಸೇರುವಂತಾಗಿದೆ.
ಅಂದ ಹಾಗೇ ಇಂತಹುದೊಂದು ಘಟನೆ ನಡೆದಿರುವುದು ಹುಬ್ಬಳ್ಳಿಯ ಕೊಪ್ಪಕರ್ ರಸ್ತೆಯಲ್ಲಿ. ಇಲ್ಲಿನ SBI ಬ್ಯಾಂಕ್ ಗೆ ಕಳೆದ ಮಂಗಳವಾರ ನುಗ್ಗಿದ ಪ್ರವೀಣ ಕುಮಾರ (30) ಮ್ಯಾನೇಜರ್ ಮತ್ತು ಕ್ಯಾಶಿಯರ್ ಗೆ ಚಾಕು ತೋರಿಸಿ ಬೆದರಿಸಿ 6.39 ಲಕ್ಷ ರೂಪಾಯಿ ಎಗರಿಸಿದ್ದಾನೆ. ಆದರೆ ಕದ್ದವನ ಅದೃಷ್ಟ ಗಟ್ಟಿ ಇರಲಿಲ್ಲ.
ಮಂಕಿ ಕ್ಯಾಪ್ ಹಾಕಿಕೊಂಡು ಮಂಗಳವಾರ ಮಧ್ಯಾಹ್ನ 2.15ರ ಸುಮಾರಿಗೆ ಬ್ಯಾಂಕಿಗೆ ನುಗ್ಗಿದವನು ಕ್ಯಾಶ್ ಇಟ್ಟುಕೊಂಡು ಪರಾರಿಯಾಗಲು ಮುಂದಾಗಿದ್ದಾನೆ. ಈ ವೇಳೆ ತಡೆಯಲು ಯತ್ನಿಸಿದ ಸ್ಥಳೀಯರಿಗೆ ಚಾಕು ತೋರಿಸಿ ಎಸ್ಕೇಪ್ ಆಗಿದ್ದಾನೆ. ಈ ವೇಳೆ ಜನ ಕಳ್ಳನನ್ನು ಬೆನ್ನಟ್ಟುತ್ತಿರುವುದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಉಮೇಶ್ ಬಂಗಾರಿ ಹಾಗೂ ಗಸ್ತಿನಲ್ಲಿದ್ದ ಮಂಜುನಾಥ ಹಾಲವರ ಕಳ್ಳನನ್ನು ಬೆನ್ನತ್ತಿ 200 ಮೀ ದೂರದಲ್ಲಿ ಹಿಡಿದಿದ್ದಾರೆ.
ಇನ್ನು ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಪ್ರವೀಣ, ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದು, ಇನ್ನೆರಡು ದಿನದಲ್ಲಿ ತನ್ನ ಮದುವೆ ನಿಶ್ಚಯವಾಗಿದೆ ಎಂದು ಪೊಲೀಸ್ ವಿಚಾರಣೆಯಲ್ಲಿ ಹೇಳಿದ್ದಾನೆ.
ಈ ನಡುವೆ ಕಳ್ಳನನ್ನು ಹಿಡಿದ ಪೊಲೀಸರಿಗೆ ತಲಾ 25 ಸಾವಿರ ಬಹುಮಾನವನ್ನು ಪೊಲೀಸ್ ಆಯುಕ್ತ ಲಾಬೂ ರಾಮ್ ಘೋಷಿಸಿದ್ದಾರೆ.
Discussion about this post