ದೋಸೆ ಮೇಳದಲ್ಲಿ ಲೆಕ್ಕವಿಲ್ಲದಷ್ಟು ವೈರಟಿ ದೋಸೆಗಳಿರಲಿದೆಯಂತೆ
ಫುಡ್ ಫೆಸ್ಟಿವಲ್, ಅವರೆಕಾಳು ಜಾತ್ರೆ ಇವೆಲ್ಲಾ ಬೆಂಗಳೂರಿನಲ್ಲಿ ಮಾಮೂಲಿ, ಗಲ್ಲಿಗೊಂದು ಸ್ಟ್ರೀಟ್ ಫುಡ್ ಏರಿಯಾಗಳಿರೋ ಕಾರಣ ಅಲ್ಲಿ ನಿತ್ಯ ಹಬ್ಬ. ಜೊತೆಗೆ ಆಹಾರ ಮೇಳಗಳಿಗೂ ಅಲ್ಲಿ ಬರವಿಲ್ಲ. ಇತ್ತೀಚೆಗೆ ಮಂಗಳೂರಿಗೂ ಈ ಸಂಸ್ಕೃತಿ ಕಾಲಿಟ್ಟಿದ್ದು, ಮೊನ್ನೆ ಮೊನ್ನೆ ಸ್ಟ್ರೀಟ್ ಫುಡ್ ಮೇಳಕ್ಕೆ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಇದೀಗ ಪುತ್ತೂರಿನಲ್ಲಿ ದೋಸೆ ಮೇಳ.
ಪುತ್ತೂರಿನ ರಿಫ್ರೆಶ್ ಕೆಫೆ ಆಶ್ರಯದಲ್ಲಿ ನಡೆಯಲಿರುವ ದೋಸೆ ಹಬ್ಬವನ್ನು ಮರಿಕೆ ಸಾವಯವ ಮಳಿಗೆಯ ಸುಹಾಸ್ ಮರಿಕೆ ಮತ್ತು ತಂಡ ಆಯೋಜಿಸಿದ್ದು, ಮೂರು ದಿನಗಳ ಕಾಲ ನೂರಾರು ಬಗೆಯ ದೋಸೆಯನ್ನು ಸವಿಯೋ ಅವಕಾಶ ಪುತ್ತೂರಿಗರಿಗೆ ಸಿಗಲಿದೆ. ದೋಸೆ ತಿನ್ನೋ ಆಸೆ ಇದ್ರೆ ಬೇರೆ ಊರಿನವರೂ ಪುತ್ತೂರಿಗೆ ಮುಖ ಮಾಡಬಹುದು.
ಇದನ್ನೂ ಓದಿ : ಸಾಮಾಜಿಕ ಹೋರಾಟಗಾರ ಕಾಂಗ್ರೆಸ್ ಮುಖಂಡ ಪದ್ಮನಾಭ ನರಿಂಗಾನ ಇನ್ನಿಲ್ಲ
ಫೆಬ್ರವರಿ 9, 10 ಮತ್ತು 11 ರಂದು ಈ ದೋಸೆ ಮೇಳ ನಡೆಯಲಿದ್ದು, ಸಂಜೆ 3 ರಿಂದ ರಾತ್ರಿ 9 ಗಂಟೆಯ ತನಕ ಈ ದೋಸೆ ವೈಭವ ನಡೆಯಲಿದೆ.
ಇನ್ನು ವೈವಿಧ್ಯಮಯ ದೋಸೆಗಳ ದೋಸೆ ವೈಭವದ ಬಗ್ಗೆ ಮಾತನಾಡಿರುವ ಸುಹಾಸ್ ಮರಿಕೆ, ಮಾಮೂಲಿ ಹೋಟೆಲ್ ಗಳಲ್ಲಿ ದೊರೆಯುವ ಸಾದಾ, ಸೆಟ್ ತುಪ್ಪ, ರವಾ, ನೀರುಳ್ಳಿ ದೋಸೆ ಮಸಲಾ ದೋಸೆ ಹೀಗೆ ಎಲ್ಲಾ ದೋಸೆಗಳು ದೋಸೆ ಮೇಳದಲ್ಲಿ ಸಿಗಲಿದೆ. ಇದರೊಂದಿಗೆ ಮಕ್ಕಳಿಗೂ ಆಕರ್ಷಣಿಯವಾಗಿರಲೆಂದು ಚೀಸ್, ಪನ್ನೀರ್, ಮಸ್ರೂಮ್ ದೋಸೆಗಳನ್ನು ಮೇಳದಲ್ಲಿ ಹೊಯ್ಯಲಾಗುತ್ತದೆ.
ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಮತ್ತು ಚೈನೀಸ್ ಪ್ಲೇವರ್ ಗಳು ದೋಸೆ ಪ್ರಿಯರ ಬಾಯಿ ರುಚಿ ತಣಿಸಲಿದೆ.
ಪುತ್ತೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ಈ ದೋಸೆ ಮೇಳಕ್ಕೆ ಮೂರು ಥೀಮ್ ಗಳನ್ನು ಇಟ್ಟುಕೊಳ್ಳಲಾಗಿದೆ. ಮೊದಲ ದಿನ ಗ್ರಾಹಕರಿಗೆ ವೆಜಿಟೇಬಲ್ ದೋಸೆಗಳು ಸಿಗಲಿದ್ದು, ಕ್ಯಾರೆಟ್, ಬೀಟ್ ರೂಟ್, ಚೀನಿಕಾಯಿ ದೋಸೆ ಹೀಗೆ ವಿವಿಧ ತರಕಾರಿ ದೋಸೆಗಳನ್ನು ಗ್ರಾಹಕರು ಸವಿಯಬಹುದಾಗಿದೆ.
ಎರಡನೇ ದಿನ ಸೊಪ್ಪು ದೋಸೆಗೆ ಆದ್ಯತೆ ನೀಡಲಾಗಿದ್ದು, ಸಬ್ಬಸಿಗೆ, ನುಗ್ಗೆ ಸೊಪ್ಪು, ಪಾಲಕ್, ಮೆಂತೆ, ಕೊತ್ತಂಬರಿ ಸೊಪ್ಪು ಹೀಗೆ ವಿವಿಧ ಸೊಪ್ಪುಗಳಿಂದ ತಯಾರಿಸಿದ ದೋಸೆಗಳು ಲಭ್ಯವಿರುತ್ತದೆ. ಅಂದು ( 10.02.2024) ವಿಶೇಷವಾಗಿ ಹಲಸಿನ ಹಣ್ಣಿನ ದೋಸೆಯನ್ನು ತಯಾರಿಸಲಾಗುತ್ತದೆ.
ಮೂರನೇ ದಿನ ಅಂದ್ರೆ ಭಾನುವಾರ ಕಾಳುಗಳ ದೋಸೆ ತಯಾರಾಗಲಿದೆ. ಹೆಸರು, ಮಡಿಕೆ ಕಾಳು, ಸ್ವೀಟ್ ಕಾರ್ನ್, ಶೇಂಗಾ ಹೀಗೆ ಅನೇಕ ಕಾಳುಗಳ ದೋಸೆ ಗ್ರಾಹಕರಿಗೆ ಸಿಗಲಿದೆ. ಅಂದು ಮಾವಿನ ಹಣ್ಣಿನ ದೋಸೆ ವಿಶೇಷ ಆಕರ್ಷಣೆಯಾಗಿರುತ್ತದೆ.
ಹೀಗೆ ತರಕಾರಿ, ಸೊಪ್ಪು ಕಾಳುಗಳನ್ನು ಬಳಸಿ ದೋಸೆ ಮಾಡುವುದರಿಂದ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶ ಸಿಗುತ್ತದೆ ಅನ್ನುವುದನ್ನು ಜನರಿಗೆ ತಿಳಿಸುವುದೇ ಇದರ ಉದ್ದೇಶ ಅನ್ನುತ್ತಾರೆ ಸುಹಾಸ್ ಮರಿಕೆ.
ಕೇವಲ ದೋಸೆ ಸವಿಯೋದು ಮಾತ್ರವಲ್ಲ. ದೋಸೆ ಮೇಳಕ್ಕೆ ಬಂದವರು ಮುಂದಿನ ದಿನಗಳಲ್ಲಿ ಮನೆಯಲ್ಲಿ ತಯಾರಿಸುವ ಸಾಂಪ್ರದಾಯಿಕ ದೋಸೆಗಳನ್ನು ಸ್ಪಲ್ಪ ದಿನ ಸೈಡಿಗಿಡಬಹುದು. ದೋಸೆ ಮೇಳಕ್ಕೆ ಬಂದವರಿಗೆ ಹೊಸ ಆಯಾಮದ ಚಿಂತನೆಗೆ ಅವಕಾಶವಿದ್ದು ದೋಸೆ ಮೇಳದಲ್ಲೇ ರೆಸಿಪಿ ಕಲಿತು ಮನೆಯಲ್ಲೂ ಟ್ರೈ ಮಾಡಬಹುದಾಗಿದೆ.
ಒಟ್ಟಿನಲ್ಲಿ ದೋಸೆ ಮೇಳ ಮನಸ್ಸು, ಕಣ್ಣು, ಬಾಯಿಗೆ ಹಬ್ಬವಾಗೋದರಲ್ಲಿ ಸಂಶಯವಿಲ್ಲ.
Discussion about this post