ಅಹಿಂದ ವರ್ಗದ ದನಿಯಾಗಿದ್ದವರು ನೇರ ನಡೆ ನುಡಿಯ ಪದ್ಮನಾಭ ನರಿಂಗಾನ
ಹಿರಿಯ ಸಾಮಾಜಿಕ ಹೋರಾಟಗಾರ, ಕಾಂಗ್ರೆಸ್ ಮುಖಂಡ ಪದ್ಮನಾಭ ನರಿಂಗಾನ ನಿಧನ ಹೊಂದಿದ್ದಾರೆ. ಅಪರೂಪದ ಪ್ರಾಮಾಣಿಕ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅನೇಕ ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ನರಿಂಗಾನ ಅವರು ಬಡವರ ಮತ್ತು ಹಿಂದುಳಿದ ವರ್ಗದ ದನಿಯಾಗಿದ್ದರು.
ಸಾಮಾನ್ಯ ಬಡ ದಲಿತ ಕುಟುಂಬದಿಂದ ಬಂದ ಪದ್ಮನಾಭರು ತಮ್ಮ ಶ್ರಮ ಮತ್ತು ಬದ್ಧತೆಯಿಂದ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಒಂದು ಕಾಲದಲ್ಲಿ ಪಕ್ಕಾ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರಾಗಿದ್ದ ಅವರು ಅನ್ಯಾಯ ವಿರುದ್ಧ ಅನೇಕ ಸಲ ದನಿ ಎತ್ತಿದ್ದಾರೆ.
ಇದನ್ನೂ ಓದಿ : ಹನಿ ಟ್ರ್ಯಾಪ್ ದಂಧೆಯ ಫೈಝಲ್ ಲುಬಾ ದಂಪತಿ ಅಂದರ್
ಎರಡು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ , ಕೈರಂಗಳ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿ , ಸ್ಥಳೀಯ ದೇವಸ್ಥಾನ ಮತ್ತು ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ ಹಿರಿಮೆ ಪದ್ಮನಾಭ ಅವರದ್ದು.
ಸಾಮಾಜಿಕ ಕ್ಷೇತ್ರದ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅವರು ಮತ್ತಷ್ಟು ಸಾಮಾಜಿಕ ಸೇವೆಯ ಬಗ್ಗೆ ಕನಸು ಕಂಡಿದ್ದರು. ಜೀವನದಲ್ಲಿ ಒಂದು ಸಲ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಆಸೆ ಪಟ್ಟಿದ ಅವರು ಈ ಮುಂದಿನ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಯಸಿದ್ದರೂ ಕೂಡಾ.
ತಮಗೆ ದೊಡ್ಡ ದೊಡ್ಡ ರಾಜಕೀಯ ನಾಯಕರ ಸಂಪರ್ಕವಿದ್ದರೂ ಕೂಡಾ ಸ್ವಾರ್ಥಕ್ಕಾಗಿ ಅದನ್ನು ಬಳಸಿಕೊಂಡವರಲ್ಲ. ರಾಜಕೀಯ ನಾಯಕ ಅಂದ್ರೆ ಹೇಗಿರಬೇಕು ಅನ್ನುವುದಕ್ಕೆ ಆದರ್ಶರಾಗಿ ಬಾಳಿ ಬದುಕಿದವರು ಪದ್ಮನಾಭ ನರಿಂಗಾನ.
ಸ್ಪೀಕರ್ ಯುಟಿ ಖಾದರ್ ಸೇರಿದಂತೆ ಅನೇಕ ಗಣ್ಯರು ಪದ್ಮನಾಭ ನರಿಂಗಾನ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಮೃತರುಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Discussion about this post