ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( dk shivakumar ) ಮುಖ್ಯಮಂತ್ರಿಯಾಗುವ ಕನಸನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು : ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಂ ಯಾರು ಅನ್ನುವುದು ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿಯವರ ( dk shivakumar ) ಪೈಪೋಟಿಯಲ್ಲಿ ಲಾಭ ಪಡೆಯಲು ಬಿಜೆಪಿ ನಾಯಕರು ಪೈಪೋಟಿಗೆ ನಿಂತಿದ್ದಾರೆ. ಈ ನಡುವೆ ಬಿಜೆಪಿ ನಾಯಕರಿಗೆ ಡಿಕೆ ಶಿವಕುಮಾರ್ ಕೊಟ್ಟ ಹೇಳಿಕೆ ಬಿಸಿ ಮುಟ್ಟಿಸಿದೆ. ನನಗೊಂದು ಅವಕಾಶ ಕೊಡಿ ಎಂದು ಒಕ್ಕಲಿಗರ ಮತದಾರರಲ್ಲಿ ಬಹಿರಂಗ ಮನವಿ ಮಾಡಿರುವುದು ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಒಕ್ಕಲಿಗ ಸಮುದಾಯ ಡಿಕೆಶಿ ಕಡೆಗೆ ತಿರುಗಿದ್ರೆ ಮೋದಿಗಾಗಿ ಮತ ಕೊಡಿ ಅಂದ್ರು ಬಿಜೆಪಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ.
ಹಾಗಾದ್ರೆ ಡಿಕೆ ಶಿವಕುಮಾರ್ ಒಕ್ಕಲಿಗರ ಮುಂದೆ ಅವಕಾಶಕ್ಕಾಗಿ ಮನವಿ ಮಾಡಿದ್ಯಾಕೆ. ಅದರ ಹಿಂದೆ ಒಂದು ಸ್ಟೋರಿ ಇದೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿಯಾಗಬೇಕು ಅನ್ನುವ ಕನಸು ಕಟ್ಟಿಕೊಂಡೇ ರಾಜಕೀಯದಲ್ಲಿ ಬೆಳೆದವರು ಡಿಕೆಶಿ. ಪಕ್ಷ ನಿಷ್ಟೆಯ ವಿಷಯದಲ್ಲಿ ಡಿಕೆಶಿಯವರಿಗೆ ಡಿಕೆಶಿಯವರೇ ಸಾಟಿ. ಡಿಕೆಶಿಯವರ ವೇಗವನ್ನು ಕಟ್ಟಿಹಾಕಲು ಇನ್ನಿಲ್ಲದ ಪ್ರಯತ್ನಗಳು ನಡೆದರೂ ಕುಗ್ಗದೆ ಅವರು ನಾನು ಕನಕಪುರ ಬಂಡೆ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ : NEET 2022 : ಮಹಿಳಾ ಪರೀಕ್ಷಾ ಅಭ್ಯರ್ಥಿಗಳ ಒಳ ಉಡುಪು ಪರಿಶೀಲನೆ
ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಅವಕಾಶ ವಂಚಿತರಾದ ಡಿಕೆಶಿ ಸಹನೆಯ ಮೂರ್ತಿ ಅನ್ನುವಂತೆ ಕೂತಿದ್ದರು. ಸಿದ್ದರಾಮಯ್ಯ ಅವರ ತಂತ್ರಗಾರಿಕೆಯಿಂದಲೇ ಮಂತ್ರಿ ಸ್ಥಾನ ತಪ್ಪಿದೆ ಅನ್ನುವುದು ಗೊತ್ತಿದ್ದರೂ ಸಿದ್ದು ವಿರುದ್ಧ ಒಂದಕ್ಷರ ಮಾತನಾಡಿರಲಿಲ್ಲ. ಯಾವಾಗ ಸಿದ್ದು ಸಂಪುಟ ಸೇರಲು ಸಿಕ್ಕಾಪಟ್ಟೆ ಸರ್ಕಸ್ ಮಾಡಬೇಕಾಯ್ತೋ, ಆಗ್ಲೇ 2023ಕ್ಕೆ ನಾನು ಸಿಎಂ ಆಗಲೇಬೇಕು ಎಂದು ಡಿಸೈಡ್ ಮಾಡಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದೆ ಅನ್ನುವುದು ಡಿಕೆಶಿಗೆ ಗೊತ್ತಿತ್ತು. ಹೀಗಾಗಿ ಅವರು ಟಾರ್ಗೇಟ್ 2023 ಇಟ್ಟುಕೊಂಡಿದ್ದರು.
ಅದರಂತೆ ಈಗ ಡಿಕೆಶಿಯವರು ದಾಳ ಉರುಳಿಸಲಾರಂಭಿಸಿದ್ದಾರೆ. ಜೆಡಿಎಸ್ ಪಕ್ಷದ ಮತ ಬ್ಯಾಂಕ್ ಎಂದೇ ಗುರುತಿಸಿಕೊಂಡಿರುವ ಒಕ್ಕಲಿಗ ಸಮುದಾಯ ಈಗ ದಳಪತಿಗಳ ಜೊತೆಗಿಲ್ಲ. ಮುಖ್ಯವಾಗಿ ಜೆಡಿಎಸ್ ನಲ್ಲಿದ್ದ ಒಕ್ಕಲಿಗರು ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ. ಹೀಗಾಗಿ ಒಕ್ಕಲಿಗ ಮತಗಳು ಕೂಡಾ ಕಾಂಗ್ರೆಸ್ ಕಡೆಗೆ ಬಂದಾಗಿದೆ. ಇದೇ ಕಾರಣಕ್ಕಾಗಿಯೇ ಜೆಡಿಎಸ್ ನ ಒಕ್ಕಲಿಗ ನಾಯಕರನ್ನು ಕಾಂಗ್ರೆಸ್ ಗೆ ಸ್ವಾಗತಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ದಳಪತಿಗಳ ಜೊತೆಗೆ ಗುರುತಿಸಿಕೊಂಡಿದ್ದ ‘ವೇದಿಕೆ’ಗಳು ಕೂಡಾ ಡಿಕೆಶಿ ಬಣ ಸೇರಿದೆ.
ಒಂದು ವೇಳೆ 70 ಕ್ಷೇತ್ರಗಳಲ್ಲಿ ತನ್ನ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬಂದ್ರೆ ಸಹಜವಾಗಿಯೇ ಸಿದ್ದರಾಮಯ್ಯ ಸೈಡಿಗೆ ಸರಿಯಬೇಕಾಗುತ್ತದೆ. ಜೊತೆಗೆ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿರುವ ಕುಮಾರಸ್ವಾಮಿ ಕೂಡಾ ಸರ್ಕಾರ ರಚನೆಯ ಸರ್ಕಸ್ ನಲ್ಲಿ ಕೈಯಾಡಿಸಲು ಸಾಧ್ಯವಾಗೋದಿಲ್ಲ.
ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಈಗ ರಾಜಾಹುಲಿಯಾಗಿ ಉಳಿದಿಲ್ಲ. ಈ ಕಾರಣದಿಂದ ವೀರಶೈವ ಮತ್ತು ಲಿಂಗಾಯತ ಮತಗಳು ಕಾಂಗ್ರೆಸ್ ಕಡೆಗೆ ಬರುವ ನಿರೀಕ್ಷೆ ಇದೆ. ಹೀಗಾದ್ರೆ ಕಾಂಗ್ರೆಸ್ ಬಹುಮತ ಪಡೆಯೋದು ಗ್ಯಾರಂಟಿ ಅನ್ನುವುದು ಡಿಕೆಶಿ ಲೆಕ್ಕಚಾರ.
ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಸಿಎಂ ಕುರ್ಚಿಯ ಸರ್ಕಸ್ ನಲ್ಲಿ ಮತದಾರರು ಬೇಸರಗೊಂಡರೆ ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭವಾದರೂ ಅಚ್ಚರಿ ಇಲ್ಲ.
Discussion about this post