ಕರಾವಳಿಯ ಕಾರಣಿಕ ದೈವ ಕೊರಗಜ್ಜನಿಗೆ ಇದೀಗ ಕರಾವಳಿಯವರು ಮಾತ್ರ ಭಕ್ತರಲ್ಲ. ಘಟ್ಟದ ಮೇಲಿನಿಂದಲೂ ಭಕ್ತರ ದಂಡು ಹರಿದು ಬರಲಾರಂಭಿಸಿದೆ. ಅದರಲ್ಲೂ ಸೆಲೆಬ್ರೆಟಿಗಳ ಬಳಗ ದೊಡ್ಡದಾಗಿದೆ.
ತಮ್ಮ ಕಷ್ಟ ನಷ್ಟಗಳನ್ನು ಹೇಳಿಕೊಂಡರೆ, ಕೊರಗಜ್ಜನು ಅದನ್ನು ಪರಿಹರಿಸುತ್ತಾನೆ ಅನ್ನುವ ನಂಬಿಕೆ ಸತ್ಯವಾಗುತ್ತಿರುವುದೇ ಇದಕ್ಕೆ ಕಾರಣ. ಹೀಗಾಗಿಯೇ ಕೊರಗಜ್ಜನ ಕಾರ್ನಿಕಕ್ಕೆ ಜನ ಶರಣು ಅಂದಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ ಅನೇಕರ ಬದುಕಿನಲ್ಲಿ ಪವಾಡಗಳು ಕೂಡಾ ನಡೆದಿದೆ.
ಇದೀಗ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಸರದಿ.
2012 13 ನೇ ಸಾಲಿನಲ್ಲಿ ನಾಟಕ ಸಲುವಾಗಿ ಮಂಗಳೂರಿಗೆ ಬಂದಿದ್ದ ಮಂಜು ಮತ್ತೆ ಮಂಗಳೂರು ಕಡೆ ಮುಖ ಮಾಡಿರಲಿಲ್ಲ. ಹಾಗಂತ ಕರಾವಳಿಯ ನೆನಪಾಗಲಿಲ್ಲವೇ ಖಂಡಿತಾ ಇತ್ತು. ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೂ ಅವರಿಗೆ ಕರಾವಳಿಯ ಕೊರಗಜ್ಜನ ನೆನಪಾಗಿತ್ತು. ಕರಾವಳಿಯ ಸ್ನೇಹಿತರು ಕೂಡಾ ಕೊರಗಜ್ಜನನ್ನು ಮನಸ್ಸಲ್ಲಿ ಪ್ರಾರ್ಥಿಸು ಗೆಲುವು ನಿನ್ನದಾಗುತ್ತದೆ ಅಂದಿದ್ದರು. ಹೀಗಾಗಿಯೇ ಮಹಾಮನೆಗೆ ಹೋಗುವ ಮುನ್ನಸ ಗೆದ್ದು ಬಂದರೆ ಕೊರಗಜ್ಜ ನಿನಗೊಂದು ಕೋಲ ಕೊಡುತ್ತೇನೆ ಎಂದು ಪ್ರಾರ್ಥಿಸಿದ್ದರು.
ಬಿಗ್ ಬಾಸ್ ಗೆದ್ದು ದಿನ ಅನೇಕ ಕಳೆದರೂ ಕೋಲ ಕೊಡುವ ದಿನ ಕೈಗೂಡಿ ಬಂದಿರಲಿಲ್ಲ. ಧರ್ಮಸ್ಥಳಕ್ಕೂ ಬಂದು ಹೋದರೂ ಕೊರಗಜ್ಜನ ಸನ್ನಿಧಿಗೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇದೀಗ ಬಿಡುವು ಮಾಡಿಕೊಂಡು ಮಂಗಳೂರಿಗೆ ಬಂದಿರುವ ಮಂಜು, ಕುತ್ತಾರು ಕ್ಷೇತ್ರದಲ್ಲಿ ಕೊರಗಜ್ಜನಿಗೆ ಕೋಲ ಹರಕೆ ಒಪ್ಪಿಸಿದ್ದಾರೆ.
ಇನ್ನು ತಮ್ಮ ಕೊರಗಜ್ಜ ಸನ್ನಿಧಿ ಭೇಟಿ ಬಗ್ಗೆ ಮಾತನಾಡಿರುವ ಮಂಜು ಕೊರಗಜ್ಜನ ಮಹಿಮೆ ಬಗ್ಗೆ ನನಗೆ ಅರಿವಿದೆ. ಹೀಗಾಗಿ ಆ ದೈವದ ಬಗ್ಗೆ ಅಪಾರ ಭಕ್ತಿಯಿದೆ. ಗೆದ್ರೆ ಖಂಡಿತಾ ಬಂದೇ ಬರ್ತಿನಿ ಅಂತ ಹರಕೆ ಕಟ್ಟಿದ್ದೆ ಅದರಂತೆ ಇದೀಗ ಹರಕೆ ಒಪ್ಪಿಸಿದ್ದೇನೆ ಅಂದಿದ್ದಾರೆ ಮಂಜು ಪಾವಗಡ
Discussion about this post