ಬೆಂಗಳೂರು : ದೇವನಹಳ್ಳಿ ಸಮೀಪದ ಕಾರಹಳ್ಳಿಯ BSF ಶಿಬಿರದಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿದೆ. ಮೊದಲ ಹಂತದ ಪರೀಕ್ಷೆಯಲ್ಲಿ 34 ಜನರಿಗೆ ಸೋಂಕು ಪತ್ತೆಯಾಗಿತ್ತು. ಇದಾದ ಬಳಿಕ ಎಲ್ಲರನ್ನೂ ಪರೀಕ್ಷೆ ಒಳಪಡಿಸಲಾಗಿತ್ತು, ಆ ವೇಳೆ ಮತ್ತೆ 36 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಮತ್ತೆ ಬಂದ ಆರೋಗ್ಯ ಇಲಾಖೆ ವರದಿಯಲ್ಲಿ ಸೋಂಕಿತರ ಪ್ರಮಾಣ ಏರುತ್ತಲೇ ಹೋಗಿದೆ. ಇದೀಗ ಶನಿವಾರ ಮತ್ತೆ 14 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತ ಯೋಧರ ಸಂಖ್ಯೆ 94ಕ್ಕೆ ಏರಿದೆ.
ಈ ಪೈಕಿ 60 ಯೋಧರನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆ ಹಾಗೂ 20 ಯೋಧರನ್ನು ಆಕಾಶ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದ 14 ಯೋಧರನ್ನು BSF ಆರೈಕೆ ಕೇಂದ್ರದಲ್ಲಿ ಇರಿಸಲಾಗಿದೆ.
ಸೆಪ್ಟಂಬರ್ 15 ರಂದು ಮೇಘಾಲಯದ ಶಿಲ್ಲಾಂಗ್ ನಿಂದ 150 ಯೋಧರು, ಉಗ್ರ ನಿಗ್ರಹ ಸಂಬಂಧ ತರಬೇತಿ ಸಲುವಾಗಿ ಕಾರಹಳ್ಳಿ ಕ್ಯಾಂಪ್ ಗ ಬಂದಿದ್ದರು. ಈ ವೇಳೆ ಕೊರೋನಾ ಮಾರ್ಗಸೂಚಿಯಂತೆ ಸೋಂಕು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಪತ್ತೆಯಾಗಿದೆ. ಒಟ್ಟು 800 ಮಂದಿ ಯೋಧರು ಉಗ್ರ ನಿಗ್ರಹ ತರಬೇತಿಯಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ಭಾಗಗಳಿಂದ ಬಂದಿದ್ದರು. ಇದೀಗ ತರಬೇತಿ ಸ್ಥಗಿತಗೊಳಿಸಲಾಗಿದೆ. ಇನ್ನೂ ಹಲವು ಯೋಧರ ವರದಿ ಬರುವುದು ಬಾಕಿ ಇದ್ದು ಎಲ್ಲರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ.
Discussion about this post