ಕೊರೋನಾ ಸೋಂಕು ಸೋಲಿಸಲೇಬೇಕು ಅನ್ನುವ ನಿಟ್ಟಿನಲ್ಲಿ ಅಮೆರಿಕಾ ಲಸಿಕಾ ಅಭಿಯಾನಕ್ಕೆ ಸಿಕ್ಕಾಪಟ್ಟೆ ವೇಗ ನೀಡಿತ್ತು. ಜನವರಿಯಲ್ಲಿ ಲಸಿಕಾ ಅಭಿಯಾನ ಬಿರುಸಾಗಿ ನಡೆದಿತ್ತು. ಒಂದು ಹಂತದಲ್ಲಿ ಕೊರೋನಾ ಸೋಲಿಸಿಬಿಟ್ಚೆವು ಅನ್ನುವ ಹೆಮ್ಮೆಯೊಂದಿಗೆ ಮಾಸ್ಕ್ ಕಿತ್ತು ಹಾಕಲಾಗಿತ್ತು. ಆದರೆ ಅಲ್ಲಿ ಶೇ100ರಷ್ಟು ಲಸಿಕೆ ಹಾಕಿರಲಿಲ್ಲ. ಹೀಗಾಗಿ ಯಾರೆಲ್ಲ ಲಸಿಕೆ ಹಾಕಿಲ್ಲವೋ ಅವರು ಕಂಟಕವಾಗಿ ಪರಿಣಮಿಸಿದ್ದಾರೆ ಮಾತ್ರವಲ್ಲದೆ ಅವರಿಗೆ ಕೊರೋನಾ ಕಂಟಕವಾಗಿ ಪರಿಣಮಿಸಿದೆ.
ಅಮೆರಿಕಾದಲ್ಲಿ ನಿತ್ಯ 1.5 ಲಕ್ಷ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಮೃತಪಡುತ್ತಿದ್ದಾರೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿ ಹೋಗಿದ್ದು, ಆಮ್ಲಜನಕದ ಕೊರತೆ ತೀವ್ರವಾಗಿದೆ. ಅದರಲ್ಲೂ ಫ್ಲೋರಿಡಾದ ಸ್ಥಿತಿ ತೀರಾ ಗಂಭೀರವಾಗಿದ್ದು, 68 ಆಸ್ಪತ್ರೆಗಳಲ್ಲಿ 2 ದಿನಗಳಿಗೆ ಆಗುವಷ್ಟೇ ಆಕ್ಸಿಜನ್ ಲಭ್ಯವಿದೆ.
ಭಾರತದಲ್ಲಿ ಎರಡನೇ ಅಲೆಯ ಅಬ್ಬರಕ್ಕೆ ಕಾರಣವಾದ ಡೆಲ್ಟಾ ತಳಿಯೇ ಅಮೆರಿಕಾದಲ್ಲಿ ಅಬ್ಬರಿಸುತ್ತಿದೆ ಎನ್ನಲಾಗಿದ್ದು, ಶುಕ್ರವಾರ ಒಂದೇ ದಿನ 1.9 ಲಕ್ಷ ಜನರಿಗೆ ಸೋಂಕು ತಗುಲಿದೆ. ಇದೀಗ ಸಕ್ರಿಯ ಪ್ರಕರಣ ಸಂಖ್ಯೆ 8 ಲಕ್ಷಕ್ಕೆ ಏರಿದ್ದು, ಪ್ರತಿ ತಾಸಿಗೆ 500 ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
Discussion about this post