ಮಂಗಳೂರು : ಮಂಗಳೂರು ಉಡುಪಿ ಜಿಲ್ಲೆಯಲ್ಲಿ ಪಡಿತರ ಮೂಲಕ ಬಿಳಿ ಅಕ್ಕಿ ವಿತರಿಸುವ ಬದಲು, ಕುಚ್ಚಲಕ್ಕಿಯನ್ನು ವಿತರಿಸಿ ಅನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ರೇಷನ್ ಅಂಗಡಿಗೆ ಬರೋ ವೈಟ್ ರೈಸ್ ಅನ್ನು ಪುಂಡಿ ಮಾಡಲು ಉಪಯೋಗಿಸುವ ಪರಿಸ್ಥಿತಿ ಕರಾವಳಿ ಮಂದಿಯದ್ದು. ಇನ್ನು ಅನ್ನ ಇಟ್ರೆ ಅದು ಗಂಟಲಲ್ಲಿ ಇಳಿಯೋದಿಲ್ಲ.
ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ಕರಾವಳಿಯವರೇ ಆಹಾರ ಸಚಿವರಾಗಿದ್ದರು. ಆದರೆ ಕರಾವಳಿಯ ಪಡಿತರ ಅಂಗಡಿಗಳಿಗೆ ಕುಚ್ಚಲಕ್ಕಿ ಸರಬರಾಜು ಮಾಡುವ ಕುರಿತಂತೆ ಯಾವುದೇ ಪ್ರಯತ್ನಗಳು ನಡೆಯಲಿಲ್ಲ. ಹಾಗಿದ್ದರೂ ಕುಚ್ಚಲಕ್ಕಿಯ ಬೇಡಿಕೆ ನಿಂತಿರಲಿಲ್ಲ.
ಇದೀಗ ಈ ಬಗ್ಗೆ ಕಾಳಜಿ ವಹಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕರಾವಳಿಯ ಪಡಿತರಿಗೆ ಕುಚ್ಚಲಕ್ಕಿ ನೀಡಿಯೇ ಸಿದ್ದ ಎಂದು ಪಣ ತೊಟ್ಟಿದ್ದಾರೆ. ಆದರೆ ಸಚಿವರ ಪ್ರಯತ್ನಕ್ಕೆ ಅಡ್ಡಿಯಾಗಿರೋದು ಕಾನೂನು. ಕೇಂದ್ರ ಸರ್ಕಾರ ಅನುಮತಿ ಇಲ್ಲದ ಹೊರತು ಕರಾವಳಿ ಮಂದಿ ಕುಚ್ಚಲಕ್ಕಿ ತಿನ್ನುವಂತಿಲ್ಲ.
ಹೀಗಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರಾದ ಶ್ರೀ ಉಮೇಶ್ ಕತ್ತಿಯವರನ್ನು ಭೇಟಿಯಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಈ ಸಂಬಂಧ ಸಭೆ ನಡೆಸಿದ್ದಾರೆ.
ಅವಳಿ ಜಿಲ್ಲೆಗಳ ಕೆಂಪು ಕುಚ್ಚಲಕ್ಕಿಯ ಬೇಡಿಕೆ ಬಗ್ಗೆ ಉಮೇಶ್ ಕತ್ತಿಗೆ ಮನವರಿಕೆ ಮಾಡಿರುವ ಕೋಟಾ ಶ್ರೀನಿವಾಸ ಪೂಜಾರಿ, ಉಭಯ ಜಿಲ್ಲೆಗಳಿಗೆ ವಾರ್ಷಿಕ ಸುಮಾರು 12 ಲಕ್ಷ ಕ್ವಿಂಟಾಲ್ ಕೆಂಪು ಕುಚ್ಚಲಕ್ಕಿ ಬೇಕಾಗಿದ್ದು, ಕೆಂಪು ಕುಚ್ಚಲಕ್ಕಿ ಪೂರೈಸಲು ರಾಜ್ಯದ ಬತ್ತದ ತಳಿಗಳಾದ MO 4, ಜಯ, ಅಭಿಲಾಷ, ಭದ್ರ ಕಜೆ, ಜ್ಯೋತಿ ಮುಂತಾದ ತಳಿಗಳನ್ನು ಖರೀದಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಸಲುವಾಗಿ ಅಗತ್ಯ ಪ್ರಸ್ಥಾವನೆ ಸಲ್ಲಿಸುವ ಕುರಿತಂತೆ ಮನವೊಲಿಸಿದ್ದಾರೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೊರತಾಗಿಯೂ ಮಂಡ್ಯ, ಮೈಸೂರು, ರಾಮನಗರ, ಬೆಳಗಾವಿ ಜಿಲ್ಲೆಗಳಿಂದ ಭತ್ತ ಖರೀದಿಸಲು ಸಭೆಯಲ್ಲಿ ಚರ್ಚೆ ನಡೆದಿದ್ದು, ಕೇಂದ್ರದ ಅನುಮತಿ ಪಡೆದು ನವೆಂಬರ್ ತಿಂಗಳಿಂದ ಸ್ಥಳೀಯ ಅಕ್ಕಿ ಗಿರಣಿಗಳ ಮೂಲಕ ಕೆಂಪು ಕುಚ್ಚಲಕ್ಕಿ ಉತ್ಪಾದಿಸಿ ಪಡಿತರದ ಮೂಲಕ ಜನಸಾಮಾನ್ಯರಿಗೆ ಹಂಚಲು ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ.
ಒಂದು ವೇಳೆ ಮೋದಿ ಸರ್ಕಾರ ಆಹಾರ ಇಲಾಖೆಯ ಪ್ರಸ್ತಾವನೆ ಒಪ್ಪದಿದ್ರೆ, ರೇಷನ್ ಅಂಗಡಿಯಲ್ಲಿ ಕುಚ್ಚಲಕ್ಕಿ ಕನಸು ಕನಸಾಗಿಯೇ ಉಳಿಯಲಿದೆ.
Discussion about this post