ಕೊರೋನಾ ಲಾಕ್ ಡೌನ್ ಕಾರಣದಿಂದ ಚಲನಚಿತ್ರ, ಧಾರವಾಹಿ, ರಿಯಾಲಿಟಿ ಶೋ ಗಳ ಚಿತ್ರೀಕರಣ ಸ್ಥಗಿತಗೊಂಡಿದೆ. ಈ ನಡುವೆ ಮಲಯಾಳಂ ಬಿಗ್ ಬಾಸ್ ಶೋ ಮಾತ್ರ ಯಾವುದೇ ಆತಂಕವಿಲ್ಲದೆ ಮುಂದುವರಿದಿತ್ತು. ಇದೀಗ ಲಾಕ್ ಡೌನ್ ನಡುವೆ ಮಲಯಾಳಂ ಬಿಗ್ ಬಾಸ್ ಚಿತ್ರೀಕರಣ ನಡೆಯುತ್ತಿದ್ದ ಶೂಟಿಂಗ್ ಸೆಟ್ ಗೆ ಪೊಲೀಸರು ದಾಳಿ ಮಾಡಿದ್ದಾರೆ.
ಚೆನೈನ ಇವಿಪಿ ಫಿಲಂ ಸಿಟಿ ಚೆಂಬರಂಕ್ಕಂನಲ್ಲಿ ಈ ಶೂಟಿಂಗ್ ನಡೆಯುತ್ತಿತ್ತು. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಶೂಟಿಂಗ್ ನಡೆಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ದಾಳಿ ನಡೆಸಿರುವ ತಮಿಳುನಾಡು ತಿರುವಳ್ಳೂರು ಕಂದಾಯ ವಿಭಾಗೀಯ ಅಧಿಕಾರಿಗಳು ಶೂಟಿಂಗ್ ಸೆಟ್ ಗೆ ಬೀಗ ಜಡಿದಿದ್ದಾರೆ.
ಪ್ರೀತಿ ಪಾರ್ಕವಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಪ್ರೊಡಕ್ಷನ್ ಹೌಸ್ ಗೆ 1 ಲಕ್ಷ ದಂಡ ವಿಧಿಸಲಾಗಿದ್ದು, Disaster Management Act, 2005 ಅಡಿಯಲ್ಲಿ ಪ್ರಕರಣ ಕೂಡಾ ದಾಖಲಿಸಿಕೊಳ್ಳಲಾಗಿದೆ.
ಇನ್ನು ದಾಳಿಯ ಕುರಿತಂತೆ ಮಾಹಿತಿ ನೀಡಿರುವ ಅಧಿಕಾರಿಗಳು, ತಮಿಳುನಾಡಿನಲ್ಲಿ ಈಗಾಗಲೇ ಎಲ್ಲಾ ರೀತಿಯ ಶೂಟಿಂಗ್ ನಿರ್ಬಂಧ ವಿಧಿಸಲಾಗಿದೆ. ಹಾಗಿದ್ದರೂ ಮಲಯಾಳಂ ಬಿಗ್ ಬಾಸ್ ಕಾರ್ಯಕ್ರಮ ನಿರಂತರವಾಗಿ ಸಾಗಿತ್ತು. ಹೀಗಾಗಿ ನಾವು ಶೂಟಿಂಗ್ ಸೆಟ್ ಗೆ ದಾಳಿ ನಡೆಸಿದ್ದೇವೆ. ಈ ವೇಳೆ ಗ್ಲಾಸ್ ಬಾಗಿಲು ಗಳ ಒಳಗೆ ಅನೇಕ ಮಂದಿ ಇರುವುದು ಪತ್ತೆಯಾಗಿದೆ. ಅಲ್ಲೇ ಅವರಿಗೆ ಆಹಾರದ ಪೂರೈಕೆಯೂ ನಡೆದಿತ್ತು. ಸೆಟ್ ನಲ್ಲಿ ಒಟ್ಟು 7 ಸ್ಪರ್ಧಿಗಳು, ಜೊತೆಗೆ ಕ್ಯಾಮಾರಮೆನ್, ಟೆಕ್ಸಿಷೀಯನ್, ಹಾಗೂ ಇತರೆ ಪ್ರೊಡಕ್ಷನ್ ಸಿಬ್ಬಂದಿ ಇದ್ರು.
ಈ ವೇಳೆ ಪ್ರೊಡಕ್ಷನ್ ಮುಖ್ಯಸ್ಥರು ವಿಚಾರಣೆ ನಡೆಸಿದಾಗ ಈಗಾಗಲೇ 95 ದಿನಗಳ ಶೋ ಶೂಟಿಂಗ್ ಆಗಿದೆ. 100 ದಿನಕ್ಕೆ 5 ದಿನಗಳು ಇತ್ತು ಅನ್ನುವ ಹಿನ್ನಲೆಯಲ್ಲಿ ಶೂಟಿಂಗ್ ಗೆ ಅನುಮತಿ ಕೋರಿದ್ದಾರೆ, ಆದರೆ ಅದು ಅಸಾಧ್ಯ ಎಂದು ತಿಳಿಸಿರುವ ನಾವು ಎಲ್ಲರಿಗೂ ಪಿಪಿಇ ಕಿಟ್ ಗಳನ್ನು ಕೊಟ್ಟು ಹೊರಗೆ ಕಳುಹಿಸಿದ್ದೇವೆ ಅಂದಿದ್ದಾರೆ.
ಮನೆಯೊಳಗಿದ್ದ ಸ್ಪರ್ಧಿಗಳನ್ನು ಹೊಟೇಲ್ ಗೆ ಕಳುಹಿಸಿಕೊಡಲಾಗಿದ್ದು, ತಂಡದ ಉಳಿದ ಸದಸ್ಯರನ್ನು ಆಪಾರ್ಟ್ ಮೆಂಟ್ ಒಂದರಲ್ಲಿ ವಾಸವಿದ್ದು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇದೀಗ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಕೇರಳಕ್ಕೆ ಹಿಂತಿರುಗಬೇಕಾಗಿದ್ದು, ಇ ಪಾಸ್ ವ್ಯವಸ್ಥೆ ಮಾಡಿಕೊಡುವಂತೆ ಪ್ರೊಡಕ್ಷನ್ ಹೌಸ್ ಮುಖ್ಯಸ್ಥರು ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರೆ.
ಈ ನಡುವೆ ಶೂಟಿಂಗ್ ಸೆಟ್ ನಲ್ಲಿದ್ದ ಎಲ್ಲರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 6 ಮಂದಿ ಪಾಸಿಟಿವ್ ಎಂದು ಗೊತ್ತಾಗಿದೆ. ಪಾಸಿಟಿವ್ ಆದವರು ಸ್ಪರ್ಧಿಗಳ ಜೊತೆಗೆ ಸಂಪರ್ಕದಲ್ಲಿ ಇರಲಿಲ್ಲ. ಆದರೆ ಪ್ರೊಡಕ್ಷನ್ ಹೌಸ್ ನ ಇತರೆ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದರು. ಹೀಗಾಗಿ ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಬಿಗ್ ಬಾಸ್ ಮನೆಗೆ ಹೊರಗಡೆಯಿಂದ ಆಹಾರ ವಸ್ತುಗಳ ಪೂರೈಕೆ ನಡೆದಿತ್ತು. ಹೀಗಾಗಿ ಕೊರೋನಾ ವೈರಸ್ ಬಿಗ್ ಬಾಸ್ ಮನೆಯೊಳಗಡೆ ಪ್ರವೇಶಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Discussion about this post