ಬೆಂಗಳೂರು : ಕೊರೋನಾ ಸಂಕಷ್ಟ ಕಾಲದಲ್ಲೂ ಜನರನ್ನು ಹೇಗೆ ಬಕ್ರ ಮಾಡಬಹುದು ಅನ್ನುವುದನ್ನು ರಾಜಕಾರಣಿಗಳಿಂದ ಕಲಿಯಬೇಕು. ಈಗಾಗಲೇ ನಡೆಯುತ್ತಿರುವ ಕೊರೋನಾ ಲಸಿಕಾ ಕಾರ್ಯಕ್ರಮಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಮೇ 1 ರಿಂದ ವಯಸ್ಕರೆಲ್ಲಾರಿಗೂ ಕೊರೋನಾ ಲಸಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಪ್ರಧಾನಿಯವರ ಘೋಷಣೆ ಕೇಳಿ ಮಂದಿ, ಅಮೆರಿಕಾ, ಇಸ್ರೇಲ್ ರೀತಿಯಲ್ಲಿ ನಾವು ಕೂಡಾ ಕೆಲವೇ ವಾರಗಳಲ್ಲ ಮಾಸ್ಕ್ ಕಿತ್ತು ಹಾಕುತ್ತೇವೆ ಅಂದುಕೊಂಡಿದ್ದರು ಜನ. ಆದರೆ ಇದೀಗ ಬರುತ್ತಿರುವ ಮಾಹಿತಿಗಳ ಪ್ರಕಾರ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಸಿಗುವುದು ಅನುಮಾನ.
ಈಗಾಗಲೇ ಮಹರಾಷ್ಟ್ರ, ಪಂಜಾಬ್ ಸೇರಿದಂತೆ ಬಿಜೆಪಿಯೇತರ ಆಡಳಿತವಿರುವ ಬಹುತೇಕ ರಾಜ್ಯಗಳು ಮೇ 1 ರಿಂದ ಸರ್ವರಿಗೂ ಲಸಿಕೆ ಕೊಡಲು ಸಾಧ್ಯವಿಲ್ಲ ಅಂದಿದೆ. ಒಂದು ಕಡೆ ಲಸಿಕೆಗಳ ಲಭ್ಯತೆಯ ಕೊರತೆ, ಮತ್ತೊಂದು ಬೊಕ್ಕಸದ ಸಮಸ್ಯೆ ಮಾತ್ರವಲ್ಲದೆ ಎರಡನೆ ಅಲೆಯ ಅಬ್ಬರ ಹೆಚ್ಚಾಗಿರುವ ಸಂದರ್ಭದಲ್ಲಿ ಬಹುತೇಕ ಆರೋಗ್ಯ ಸಿಬ್ಬಂದಿಗಳನ್ನು ಕೊರೋನಾ ನಿಯಂತ್ರಣ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ. ಹೀಗಾಗಿ ಆರೋಗ್ಯ ಕಾರ್ಯಕರ್ತರ ಕೊರೆತೆಯೂ ಕಾಡುತ್ತಿದೆ. ಹೀಗಾಗಿ ಏಕಾಏಕಿ ಸರ್ವರಿಗೂ ಲಸಿಕೆ ಅಸಾಧ್ಯ ಅಂದಿದೆ.
ಇನ್ನೂ ಬಿಜೆಪಿ ಆಡಳಿತವಿರುವ ರಾಜ್ಯಗಳು ಮೋದಿ ಹೇಳಿದ ಮಾತನ್ನು ಉಲ್ಲಂಘಿಸೋದು ಹೇಗೆ ಅನ್ನುವ ಮುಲಾಜಿಗೆ ಬಿದ್ದು, ಮೇ 1 ರಿಂದ ಸರ್ವರಿಗೂ ಲಸಿಕೆ ಇದೆಯೋ ಇಲ್ಲವೋ ಅನ್ನುವುದನ್ನು ಪ್ರಕಟಿಸಿಯೇ ಇಲ್ಲ. ಕೋವಿನ್ ವೆಬ್ ಸೈಟ್ ನೋಡಿದ್ರೆ ಅದರಲ್ಲು ಇನ್ನೂ ಶೆಡ್ಯೂಲ್ ಆಫ್ಸನ್ ಅನ್ನೇ ನೀಡಿಲ್ಲ.
ಈ ನಡುವೆ ಮೇ 1 ರಿಂದ ಲಸಿಕೆ ನೀಡುವುದಾಗಿ ಹೇಳಿ ಜನರನ್ನು ಬಕ್ರ ಮಾಡಿರುವ ಕುರಿತಂತೆ ಕಿಡಿ ಕಾರಿರುವ ಮಾಜಿ ಸಿಎಂ ಕುಮಾರಸ್ವಾಮಿ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಎಂದು ಬೊಬ್ಬೆ ಹೊಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪುಕ್ಕಟೆ ಪುಂಗಿ ಊದಿದ್ದೇ ಬಂತು. ಲಸಿಕೆಯ ದಾಸ್ತಾನಿಲ್ಲದೆ, ಸೂಕ್ತ ಮುನ್ನೆಚ್ಚರಿಕೆ, ವ್ಯವಸ್ಥೆ ಮಾಡಿಕೊಳ್ಳದೆ ಬರೀ ಪ್ರಚಾರ ತೆಗೆದುಕೊಂಡ ಕೇಂದ್ರ, ರಾಜ್ಯ ಸರ್ಕಾರಗಳ ನಿಲುವು ಅಕ್ಷಮ್ಯ ಮತ್ತು ಖಂಡನೀಯ ಅಂದಿದ್ದಾರೆ.
ಲಭ್ಯವಿರುವ ಮಾಹಿತಿ ಪ್ರಕಾರ ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ಏದುಸಿರು ಬಿಡುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡಲು ಹೆಣಗಾಡುತ್ತಿದೆ.
18 ವರ್ಷ ಮೇಲ್ಪಟ್ಟ ದೇಶದ ಕೋಟ್ಯಾಂತರ ಮಂದಿಗೆ ಲಸಿಕೆ ನೀಡುವುದಾಗಿ ಬಾಯಿಮಾತಿನ ಉಪಚಾರ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಣೆಗೇಡಿತನ ಮತ್ತು ತಿಕ್ಕಲುತನವನ್ನು ದೇಶದ ಜನತೆ ಎಂದಿಗೂ ಕ್ಷಮಿಸರು.
ಆತುರಗಾರನಿಗೆ ಬುದ್ಧಿ ಕಡಿಮೆ ಎಂಬಂತೆ ಕೇವಲ ಮಾತಿನಲ್ಲಿ ಜನರನ್ನು ಓಲೈಸುವ ಇಂತಹ ಬೂಟಾಟಿಕೆಯನ್ನು ಸರ್ಕಾರ ಬಿಡಬೇಕು. “ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ” ಎನ್ನುವ ಸರ್ಕಾರ ಇದ್ದರೇನು? ಇಲ್ಲದಿದ್ದರೇನು?
ಮೊದಲ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ? ಅವರಲ್ಲಿ ಎಷ್ಟು ಮಂದಿಗೆ ಎರಡನೇ ಹಂತದಲ್ಲಿ ಲಸಿಕೆ ಕೊಡಲಾಗಿದೆ ಎಂಬ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿ.
18 ವರ್ಷ ಮೇಲ್ಪಟ್ಟವರಿಗೆ ಎಷ್ಟು ಮಂದಿಗೆ ಯಾವತ್ತಿನಿಂದ ಲಸಿಕೆ ಹಾಕುವ ಅಭಿಯಾನ ಶುರು ಮಾಡುವಿರಿ? ಎಂಬುದನ್ನು ಸ್ಪಷ್ಟವಾಗಿ ದೇಶದ ಜನತೆಗೆ ಮಾಹಿತಿ ಕೊಡಿ. ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ವರ್ತಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯತನ ದೇಶದ ಜನತೆ ಮೂರ್ಖರು ಎಂದು ಭಾವಿಸಿದಂತಿದೆ.
ದೇಶದಾದ್ಯಂತ ಕೊರೋನಾ ಸೋಂಕಿತರು ಬೆಡ್, ಆಕ್ಸಿಜನ್, ಅಂಬುಲೆನ್ಸ್, ಔಷಧಿಗಳಿಲ್ಲದೆ ಪರದಾಡುತ್ತಿದ್ದಾರೆ. ಸತ್ತವರ ಅಂತ್ಯಸಂಸ್ಕಾರಕ್ಕೂ ಪಾಳಿಯಲ್ಲಿ ನಿಲ್ಲಬೇಕಾದ ವ್ಯವಸ್ಥೆ ಸೃಷ್ಟಿಸಿದ ಕೇಂದ್ರ- ರಾಜ್ಯ ಸರ್ಕಾರಗಳ ದಯನೀಯ ವೈಫಲ್ಯದ ಬಗ್ಗೆ ದೇಶದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಅರಿವುಗೇಡಿಗಳಂತೆ ಪುಕ್ಕಟೆ ಪ್ರವಚನ ನೀಡುತ್ತಿರುವ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರುಗಳು ಕನಿಷ್ಠ ಸಾಮಾನ್ಯ ರೀತಿ ಪ್ರತಿಕ್ರಿಯಿಸುವುದನ್ನು, ಇಂತಹ ದುರಿತ ಕಾಲದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ಜವಾಬ್ದಾರಿಯಿಂದ ನಿಭಾಯಿಸುವುದು ಒಳಿತು.
ಲಸಿಕೆ ನೀಡುವ ವಿಷಯದಲ್ಲಿ ಜನತೆ ಸಿನಿಕರಾಗದಂತೆ ಎಚ್ಚರವಹಿಸುವುದು ಸರ್ಕಾರಗಳ ಜವಾಬ್ದಾರಿ. ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಸರ್ಕಾರ ಉಡಾಫೆಯ ಧೋರಣೆ ತಳೆಯುವುದು ಸರಿಯಲ್ಲ.
ಮಾತಿನಲ್ಲಿ ಬ್ರಹ್ಮ ನೀತಿಯಲ್ಲಿ ಕ್ರೋಧಿ
ಈ ಲೋಕದ ಭುಂಜಕರು
ನಾ ಹೆಚ್ಚು ತಾ ಹೆಚ್ಚು ಎಂದು ನಡೆದಾಡುವರಯ್ಯ
ನಾನು ನೀನೆಂಬ ಉಭಯವಳಿದು
ತಾನು ತಾನಾದುದ ನಾನಾರನೂ ಕಾಣೆನಯ್ಯ ಝೇಂಕಾರ ನಿಜಲಿಂಗಪ್ರಭುವೆ
– ಜಕ್ಕಣಯ್ಯ
Discussion about this post