ದೇಶದಲ್ಲಿ ಕೊರೋನಾ ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಬಹುತೇಕ ಸಂಘ ಸಂಸ್ಥೆಗಳು, ರಾಜಕೀಯ ನಾಯಕರು, ಮಂದಿರ ಮಸೀದಿಗಳು ಕೊಡುಗೈ ದಾನಿಗಳಾಗಿದ್ದರು. ಆದರೆ ಎರಡನೆ ಅಲೆಯ ಹೊತ್ತಿಗೆ ಬಹುತೇಕ ದಾನಿಗಳು ಸುಸ್ತಾಗಿದ್ದಾರೆ. ಹೀಗಾಗಿ ಸೋಂಕಿನಿಂದ ನರಳುತ್ತಿರುವ ಮಂದಿ ಸಹಾಯ ಹಸ್ತ ಚಾಚುವವರ ಸಂಖ್ಯೆ ತೀರಾ ಇಳಿಮುಖವಾಗಿದೆ.
ಈ ನಡುವೆ ಕೊರೋನಾ ಸೋಂಕಿನಿಂದ ತತ್ತರಿಸಿರುವ ಗುಜರಾತ್ ಹಾಗೂ ಮುಂಬೈ ನಿಂದ ಪಾಸಿಟಿವ್ ಸುದ್ದಿಗಳು ಬರಲಾರಂಭಿಸಿದೆ. ಮಸೀದಿ ಮಂದಿರಗಳಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೇವಲ ದೇವರು, ಪ್ರಾರ್ಥನೆಗೆ ಮಾತ್ರ ಸೀಮಿತವಾಗಿದ್ದ ಸ್ಥಳಗಳಲ್ಲಿ ಚಿಕಿತ್ಸೆ ಪ್ರಾರಂಭವಾಗಿದೆ.
ಗುಜರಾತ್ ನಲ್ಲಿ ಸ್ವಾಮಿ ನಾರಾಯಣ ದೇವಸ್ಥಾನದ ವತಿಯಿಂದ 500 ಬೆಡ್ ಸಾಮರ್ಥ್ಯದ ಆಸ್ಪತ್ರೆ ಪ್ರಾರಂಭವಾಗಿದೆ. ಇದಕ್ಕಾಗಿ 3.5 ಎಕರೆ ಜಾಗದಲ್ಲಿದ್ದ ಮಂದಿರವನ್ನು ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ. ಜನರ ಸೇವೆಯೇ ಜನಾರ್ಧನ ಸೇವೆ ಅನ್ನುವ ಮಾತಿಗೆ ಈಗೊಂದು ತೂಕ ಬಂದಿದೆ.
ಕೇವಲ ಸ್ವಾಮಿನಾರಾಯಣ ದೇವಸ್ಥಾನ ಮಾತ್ರವಲ್ಲದೆ, Darul Uluum Tandalja Mosque ವತಿಯಿಂದ ವಡೋದರದಲ್ಲಿ 140 ಬೆಡ್ ಸಾಮರ್ಥ್ಯದ ಆಸ್ಪತ್ರೆ ತಲೆ ಎತ್ತಿದೆ. ಅದು ದಾರೂಲ್ ಸಂಸ್ಥೆಯ ಪ್ರಾರ್ಥನ ಮಂದಿರವೇ ಆಗಿದೆ. ಕಳೆದ ಸಲ ತನ್ನ ಹಾಸ್ಟೆಲ್ ಅನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ್ದ ಇದೇ ಸಂಸ್ಥೆ ಸಮಾಜಮುಖಿ ಕಾರ್ಯ ಮಾಡಿತ್ತು.
ಇನ್ನು ನೋಯ್ಡಾದಲ್ಲಿ ಗುರುದ್ವಾರದ 18ನೇ ಸೆಕ್ಟರ್ ವತಿಯಿಂದ ಕೊರೋನಾ ಸೋಂಕಿತರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಹೋಮ್ ಐಸೋಲೇಷನ್ ನಲ್ಲಿರುವ ಮಂದಿಗೆ ಈ ಸೇವೆ ದೊರೆಯಲಿದೆ.
ಅಹಮದಬಾದ್ ನಲ್ಲಿ ಲಯನ್ಸ್ ಕ್ಲಬ್ portable oxygen machine bank ಅನ್ನು ಸ್ಥಾಪಿಸಿದೆ. ಈ ಮೂಲಕ ತುರ್ತಾಗಿ ಆಮ್ಲಜನಕ ಬೇಕಾಗಿರುವ ಸೋಂಕಿತರಿಗೆ ಸಹಾಯ ಹಸ್ತ ಚಾಚಲಾಗಿದೆ.
ಕರ್ನಾಟಕದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ, ಬೆಂಗಳೂರಿನಲ್ಲಿ ಬೆಡ್ ಕೊರೆತೆ ತೀವ್ರವಾಗಿದೆ. ಇನ್ನು 10 ರಿಂದ 15 ದಿನ ಕಳೆದರೆ ರಾಜ್ಯದ ಬಹುತೇಕ ಜಿಲ್ಲೆಗಳು ಬೆಂಗಳೂರನ್ನು ಮೀರಿಸಲಿದೆ. ಮಂಗಳೂರು, ಮೈಸೂರು, ಕಲಬುರಗಿ, ಬೀದರ್ ಗಳಲ್ಲಿ ಬೆಡ್ ಹಾಗೂ ಆಮ್ಲಜನಕದ ಕೊರತೆ ಎದುರಾಗಲಿದೆ. ಜಿಲ್ಲಾಡಳಿತಗಳು ಈಗ್ಲೇ ಎಚ್ಚೆತ್ತುಕೊಂಡು ಸಿದ್ದತೆ ಮಾಡಿಕೊಂಡರೆ ಉತ್ತಮ.
ನಮ್ಮಲ್ಲೂ ಸುತ್ತೂರು, ಸಿದ್ದಗಂಗಾ, ಆದಿಚುಂಚನಗಿರಿ, ಮೂರು ಸಾವಿರ ಹೀಗೆ ನೂರಾರು ಮಠಗಳಿವೆ. ಅನೇಕ ಪ್ರಸಿದ್ಧ ದೇವಸ್ಥಾನಗಳ ನೂರಾರು ಕಟ್ಟಡಗಳಿವೆ. ಚರ್ಚು, ಮಸೀದಿಗಳಿಗೆ ಸಂಬಂಧಿಸಿದಂತೆ ಅನೇಕ ಜಾಗಗಳಿವೆ. ಆದರೆ ಬೇಕಾಗಿರುವುದು ಕೊರೋನಾ ಸೋಂಕಿತರಿಗೆ ಸ್ಪಂದಿಸುವ ಮನಸ್ಸು. ದೂರದ ಸ್ವಾಮಿನಾರಾಯಣ ದೇವಸ್ಥಾನದ ಮುಖಂಡರು ಮಾಡಿದ ಕೆಲಸವನ್ನು ಕರುನಾಡಿನ ಧಾರ್ಮಿಕ ಸಂಸ್ಥೆಗಳು ಮಾದರಿ ಅನ್ನುವಂತೆ ಕೈಗೆತ್ತಿಕೊಂಡರೆ ಕೊರೋನಾ ಸೋಂಕು ಸೋಲಿಸುವುದು ನಮಗೆ ಲೆಕ್ಕವೇ ಅಲ್ಲ. ಅದ್ಯಾವ ದೊಡ್ಡ ವಿಷಯ ಎಂದು ನಾವೇ ಹೇಳಬಹುದು.
Discussion about this post