ಬೆಂಗಳೂರು : ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇಂದಿನಿಂದ 15 ರಿಂದ 18ರ ವಯೋಮಾನದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ವಿತರಣೆ ಕಾರ್ಯಕ್ರಮ ಪ್ರಾರಂಭಗೊಂಡಿದೆ. ಬೆಂಗಳೂರಿನ ಮೂಡಲಪಾಳ್ಯದ ಭೈರವೇಶ್ವರನಗರದ ಬಿಬಿಎಂಪಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಇಂದು 15 ರಿಂದ 18 ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಚಿವರಾದ ಡಾ|| ಕೆ.ಸುಧಾಕರ್, ವಿ.ಸೋಮಣ್ಣ, ಬಿ.ಎ.ಬಸವರಾಜ, ಡಾ|| ಅಶ್ವತ್ಥ್ ನಾರಾಯಣ, ಹಿರಿಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಮೊದಲ ದಿನವೇ 4160 ಲಸಿಕಾ ಶಿಬಿರವನ್ನು ಆಯೋಜಿಸಲಾಗಿದ್ದು 6 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಈಗಿನ ಮಾಹಿತಿ ಪ್ರಕಾರ ರಾಜ್ಯದಲ್ಲಿ 15 ರಿಂದ 18 ವರ್ಷದ 31.75 ಲಕ್ಷ ಮಕ್ಕಳಿದ್ದು, ಶಾಲೆ ಮತ್ತು ಕಾಲೇಜುಗಳಲ್ಲೇ ಲಸಿಕಾ ವಿತರಣಾ ಕಾರ್ಯ ನಡೆಯಲಿದೆ.
ಮೊದಲ ಡೋಸ್ ನೀಡಿದ 28 ದಿನದ ಬಳಿಕ 2ನೇ ಡೋಸ್ ನೀಡಲು ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಮಕ್ಕಳಿಗಾಗಿ 16 ಲಕ್ಷ ಡೋಸ್ ಲಸಿಕೆ ಇದೀಗ ರಾಜ್ಯದಲ್ಲಿ ಲಭ್ಯವಿದೆ.
ಇನ್ನು ದೇಶದಲ್ಲಿ 15 ರಿಂದ 18 ವರ್ಷದ ಒಟ್ಟು 7.4 ಕೋಟಿ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿದ್ದು ಅವರೆಲ್ಲರಿಗೂ ಲಸಿಕೆ ಹಂಚುವುದಕ್ಕೆ ಸಿದ್ದತೆಗಳು ನಡೆದಿದೆ.
Discussion about this post