೧೫೩ ಎಕರೆ ನೀಲಗಿರಿ ನೆಡುತೋಪು ಸದ್ಬಳಕೆ
ಬೆಂಗಳೂರಿನ ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿರುವ ೧೫೩ ಎಕರೆ ನೀಲಗಿರಿ ನೆಡುತೋಪು ಪ್ರದೇಶದಲ್ಲಿ ಔಷಧೀಯ ಸಸ್ಯವನ, ಪಕ್ಷಿಲೋಕ, ಕಿರು ಮೃಗಾಲಯ, ವೃಕ್ಷೋದ್ಯಾನ, ಮತ್ತು ಜೈವಿಕ ವನ ನಿರ್ಮಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಮಾದಪ್ಪನಹಳ್ಳಿ ನೆಡುತೋಪಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಬೆಂಗಳೂರು ಉತ್ತರ ಭಾಗದಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತಹ ಯಾವುದೇ ಸಸ್ಯೋದ್ಯಾನವಿಲ್ಲ.
ಹೀಗಾಗಿ ಇಲ್ಲಿನ ಅರಣ್ಯ ಭೂಮಿಯಲ್ಲಿ ಇಂದಿರಾಗಾಂಧೀ ಜೈವಿಕ ಉದ್ಯಾನ, ವಿಶ್ವಗುರು ಬಸವಣ್ಣ ದಿವ್ಯೌಷಧೀಯ ಸಸ್ಯ ವನ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪಕ್ಷಿ ಲೋಕ, ನಾಡಪ್ರಭು ಕೆಂಪೇಗೌಡ ಕಿರು ಮೃಗಾಲಯ ಹಾಗೂ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್ ಕೊನೆಯ ವಾರದಲ್ಲಿ ಈ ಬೃಹತ್ ಉದ್ಯಾನದ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.