ಬೆಂಗಳೂರು : ಕೊರೋನಾ ಸಂಕಷ್ಟದಲ್ಲಿ ಕಾಲದಲ್ಲಿ ಪ್ರತಿಭಟನೆಯ ಹಾದಿ ಹಿಡಿದಿರುವ ಸಾರಿಗೆ ನೌಕರರ ವಿರುದ್ಧ ಈಗಾಗಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಕೊರೋನಾ ಸಮಯದಲ್ಲಿ ಹಲವು ಕಂಪನಿಗಳು ತನ್ನ ನೌಕರರಿಗೆ ಸಂಬಳವನ್ನೇ ಕೊಟ್ಟಿರಲಿಲ್ಲ. ಆದರೆ ಸಾರಿಗೆ ಇಲಾಖೆ ತಡವಾದರೂ ತನ್ನ ನೌಕರರಿಗೆ ಸಂಬಳದ ವಿಷಯದಲ್ಲಿ ಮೋಸ ಮಾಡಿಲ್ಲ.
ಈ ನಡುವೆ ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ನಡುವೆ ನಾ ಬಿಡೆ,ನೀ ಕೊಡೆ ಅನ್ನುವ ಹೋರಾಟ ಇನ್ನೂ ಮುಂದುವರಿದಿದೆ. ಯಾವಾಗ ರಾಜ್ಯ ಸರ್ಕಾರ ತಮ್ಮ ಹೋರಾಟಕ್ಕೆ ಮಣಿಯೋದಿಲ್ಲ ಎಂದು ಗೊತ್ತಾಯ್ತೋ, ಸಾರಿಗೆ ನೌಕರರು ಬೇರೆ ಬೇರೆಯವರ ಬೆಂಬಲ ಪಡೆಯುವ ಯತ್ನಕ್ಕೆ ಕೈ ಹಾಕಿದ್ದಾರೆ.
ಈ ಸಂಬಂಧ ನಟ ಯಶ್ ಅವರಿಗೆ ಬಹಿರಂಗ ಪತ್ರ ಬರೆದಿದ್ದ ನೌಕರರು , ನಿಮ್ಮ ತಂದೆಯವರೂ ಬಿಎಂಟಿಸಿಯ ನಿವೃತ ಚಾಲಕರು, ನೀವು ಸಾರಿಗೆ ನೌಕರರ ಕುಟುಂಬದ ಹಿನ್ನಲೆಯುಳ್ಳ ವ್ಯಕ್ತಿ. ಹೀಗಾಗಿ ನಮ್ಮ ಹೋರಾಟಕ್ಕೆ ನಿಮ್ಮ ಬೆಂಬಲ ಬೇಕು ಎಂದು ಕೋರಿದ್ದರು.
ಇದೀಗ ನೌಕರರ ಪತ್ರಕ್ಕೆ ಸ್ಪಂದಿಸಿರುವ ಯಶ್, ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕನ ಚಾಲಕನ ಪುತ್ರ ಹೌದು ಅಂದಿದ್ದಾರೆ. ಜೊತೆಗೆ ನಿಮ್ಮ ಸಮಸ್ಯೆಗಳೇನು ಅನ್ನುವುದು ನನಗೆ ಗೊತ್ತಿದೆ. ಎಲ್ಲಾ ಜಟಾಪಟಿಗಳನ್ನು ನಾನು ಹತ್ತಿರದಿಂದ ಕಂಡಿದ್ದೇನೆ ಅಂದಿದ್ದಾರೆ.
ಆದರೆ ನಟ ಯಶ್ ಎಲ್ಲೂ ಕೂಡಾ ಸಾರಿಗೆ ನೌಕರರ ಹೋರಾಟ ನನ್ನ ಬೆಂಬಲವಿದೆ ಅನ್ನುವುದನ್ನು ಹೇಳಿಲ್ಲ. ಬದಲಾಗಿ ಇಡೀ ವಿಷಯದ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲಿರುವ ಅವರು, ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಅಳಲು ಈ ಎರಡೂ ನನಗೆ ಬಹುವಾಗಿ ಕಾಡುತ್ತಿದೆ ಅಂದಿದ್ದಾರೆ.
ವಿಷಯದ ಕುರಿತಂತೆ ಸಾರಿಗೆ ಸಚಿವರ ಜೊತೆಗೆ ಮಾತನಾಡಿರುವುದಾಗಿ ಹೇಳಿರುವ ಯಶ್, ಸರ್ಕಾರದ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಅಂದಿದ್ದಾರೆ. ಇದೇ ವೇಳೆ ಹೋರಾಟವನ್ನು ಅಂತ್ಯಗೊಳಿಸುವಂತೆ ಪರೋಕ್ಷವಾಗಿ ವಿನಂತಿಸಿರುವ ಯಶ್, ಸಮಸ್ಯೆಗೆ ಮತ್ತೊಂದು ಸಮಸ್ಯೆ ಎಂದಿಗೂ ಪರಿಹಾರವಲ್ಲ. ಬದಲಿಗೆ ಮುಕ್ತ ಮನಸ್ಸುಗಳ ಬಿಚ್ಚು ಮಾತು ಈ ಸಮಸ್ಯೆಗೆ ಪರಿಹಾರವಾಗಬಲ್ಲುದು ಅಂದಿದ್ದಾರೆ.
Discussion about this post