ನಟ ಯಶ್ ದಂಪತಿ ತಮ್ಮ ಕುಟುಂಬ ಸದಸ್ಯರ ಜೊತೆ ಸೇರಿ ಮಲ್ಲೇಶ್ವರಂನಲ್ಲಿರುವ ದುರ್ಗಾ ರಾಧಾಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಹೋಮವನ್ನು ನಡೆಸಿದ್ದಾರೆ. ಶುಕ್ರವಾರ ಬೆಳಗ್ಗೆ 10.30ರಿಂದ ಈ ಪೂಜೆಗಳು ಪ್ರಾರಂಭಗೊಂಡಿದ್ದು, ಯಶ್ ಕುಟುಂಬದ ಎಲ್ಲಾ ಸದಸ್ಯರು ಈ ಹೋಮದಲ್ಲಿ ಭಾಗಿಯಾಗಿದ್ದರು.
ಲಭ್ಯ ಮಾಹಿತಿಯ ಪ್ರಕಾರ ಮಾರ್ಕಂಡೇಯ ಹೋಮವನ್ನು ಇಂದು ನಡೆಸಲಾಗಿದೆ. ಕೆಲ ಮಾಧ್ಯಮಗಳು ಯಶ್ ಶತ್ರು ಸಂಹಾರ ಯಾಗ ನಡೆಸಿದರು, ಕೆಜಿಎಫ್ 2 ಬಿಡುಗಡೆ ಸಂದರ್ಭದಲ್ಲೇ ಈ ಹೋಮ ನಡೆದಿರುವುದು ವಿಶೇಷ ಎಂದೆಲ್ಲಾ ಹೇಳಿತ್ತು.
ಆದರೆ ಯಶ್ ಕುಟುಂಬ ಇಂದು ಯಾವುದೇ ಶತ್ರು ಸಂಹಾರ ಯಾಗ, ಹೋಮಗಳನ್ನು ನಡೆಸಿಲ್ಲ. ಬದಲಾಗಿ ಮಕ್ಕಳ ಜಾತಕದ ಪರಿಶೀಲನೆ ವೇಳೆ ಜ್ಯೋತಿಷಿಗಳು ಕೆಲವೊಂದು ಪರಿಹಾರಗಳನ್ನು ಸೂಚಿಸಿದ್ದರು. ಹೀಗಾಗಿ ಈ ಹೋಮವನ್ನು ನಡೆಸಲಾಗಿದೆ.
ಮಾರ್ಕಡೇಂಯ ಹೋಮ ಶಿವನಿಗೆ ನಡೆಸುವ ಹೋಮವಾಗಿರುತ್ತದೆ. ಯಾವುದೇ ಜಾತಕದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಹೋಮಗಳನ್ನು ನಡೆಸುವುದು ಸರ್ವೇ ಸಾಮಾನ್ಯ.
ಯಶ್ ಸೆಲೆಬ್ರೆಟಿಯಾಗಿರುವ ಕಾರಣದಿಂದ ಅವರು ಇಂದು ನಡೆಸಿದ ಹೋಮ ಸಿಕ್ಕಾಪಟ್ಟೆ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಯಶ್ ಮತ್ತು ರಾಧಿಕಾ ತಮ್ಮ ಪುತ್ರನಿಗೆ ಕೆಲವೇ ತಿಂಗಳಲ್ಲಿ ಸರಳವಾಗಿ ನಾಮಕರಣ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಪರಿಹಾರ ಕಾರ್ಯ ಮುಗಿಸುವ ನಿಟ್ಟಿನಲ್ಲಿ ಈ ಹೋಮವನ್ನು ನಡೆಸಲಾಗಿದೆ.
Discussion about this post