ಎಳೆಯದಿದ್ದಾಗ ಎಳನೀರು, ಬಲಿತರೆ ತೆಂಗಿನಕಾಯಿ, ಒಣಗಿದರೆ ಕೊಬ್ಬರಿ. ಕಸಗುಡಿಸಲು ಪೊರಕೆ, ಮದುವೆಗೆ ಚಪ್ಪರ, ಛಾವಣಿಗೆ ಹೊದಿಕೆ, ಹೊಲ ಗದ್ದೆಗೆ ಗೊಬ್ಬರ, ಮನೆ ಉರುವಲು ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ತೆಂಗಿನ ಮಹಿಮೆ ಮುಗಿಯುವುದಿಲ್ಲ ಇದಕ್ಕಾಗಿಯೇ ಇದನ್ನು ಕಲ್ಪವೃಕ್ಷ ಎಂದು ಕರೆದಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪೂಜಾನೀಯ ಗಿಡಗಳ ಪೈಕಿ ತೆಂಗಿನ ಗಿಡಕ್ಕೂ ಆಗ್ರಸ್ಥಾವನವಿದೆ.
ಅಂದ ಹಾಗೇ ಇಷ್ಟೆಲ್ಲಾ ಪೀಠಿಕೆಗೆ ಕಾರಣ ಇಂದು ವಿಶ್ವ ತೆಂಗು ದಿನ. ಅತ್ಯಂತ ಹೆಚ್ಚು ತೆಂಗು ಬೆಳೆಯುವ ರಾಷ್ಟ್ರಗಳ ಪೈಕಿ ಭಾರತಕ್ಕೂ ಸ್ಥಾನವಿದೆ. ಇನ್ನು ಕರ್ನಾಟಕದ ತುಮಕೂರು ಕಲ್ಪವೃಕ್ಷ ನಾಡು ಎಂದೇ ಕರೆಸಿಕೊಂಡಿದೆ. ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲೂಕಿನಲ್ಲಿ ಅತಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ. ಅದರಲ್ಲೂ ತಿಪಟೂರು ಟಾಲ್ ಎಂಬ ತೆಂಗು ತಳಿ ಸಾಕಷ್ಟು ಹೆಸರುವಾಸಿಯಾಗಿದೆ.
ಹಾಗಾದ್ರೆ ಸಪ್ಟೆಂಬರ್ 2ನ್ನು ತೆಂಗಿನ ದಿನವನ್ನಾಗಿ ಯಾಕೆ ಆಚರಿಸಲಾಗುತ್ತಿದೆ. ಇದಕ್ಕೆ ಕಾರಣ ಇಂಡೋನೇಷ್ಯಾ. ತೆಂಗಿನ ಬೆಳೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಏಷ್ಯಾ-ಫೆಸಿಫಿಕ್ ಪ್ರಾಂತ್ಯಗಳ ದೇಶಗಳಲ್ಲಿ ಆರ್ಥಿಕ ಬೆಳವಣಿಗೆಗೆ ತೆಂಗಿನಕಾಯಿ ಬೆಳೆಗಳನ್ನು ಹೆಚ್ಚು ಬೆಳೆಸುವಂತೆ ಮಾಡಲು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ತೆಂಗಿನಕಾಯಿ ದಿನಾಚರಣೆ ಮೊದಲು ಆರಂಭಗೊಂಡಿತು. ಇದಕ್ಕಾಗಿ ಜಕಾರ್ತಾದಲ್ಲಿ ಏಷ್ಯಾ ಮತ್ತು ಫೆಸಿಫಿಕ್ ತೆಂಗಿನಕಾಯಿ ಸಮುದಾಯ ಮಂಡಳಿ ( Asian and Pacific Coconut Community -APCC) ಕೂಡಾ ರಚಿಸಲಾಗಿದೆ. ಸಪ್ಟಂಬರ್ 2 ರಂದು APCC ಜನ್ಮ ತಾಳಿದ ಹಿನ್ನಲೆಯಲ್ಲಿ ಅಂದೇ ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತಿದೆ. ಮೊದಲ 2009ರ ಸಪ್ಟಂಬರ್ 2 ರಂದು ಮೊದಲ ವಿಶ್ವ ತೆಂಗು ದಿನವನ್ನು ಆಚರಿಸಲಾಯ್ತು.
Discussion about this post