ಬೆಂಗಳೂರು : ಸರ್ಕಾರಿ ವ್ಯವಸ್ಥೆಯಲ್ಲಿ ಲಾಬಿ ಅನ್ನುವುದು ಇಲ್ಲದೇ ಹೋಗಿದ್ರೆ ಅಭಿವೃದ್ಧಿ ಅನ್ನುವುದು ಎಲ್ಲೋ ಇರುತ್ತಿತ್ತು. ಲಾಬಿ ಅನ್ನುವ ಮಹಾಮಾರಿಯೇ ಅಭಿವೃದ್ಧಿಗೆ ಅಡ್ಡಿಯಾಗಿ ಕೂತಿದೆ. ಈ ಲಾಬಿ ಅನ್ನುವುದು ಕೋಟಿ ಕೋಟಿ ವ್ಯವಹಾರಕ್ಕೆ ಮಾತ್ರವಲ್ಲ ಸಾವಿರ ಲೆಕ್ಕದ ವ್ಯವಹಾರದಲ್ಲೂ ಇದೆ.
ಎಲ್ಲಿಯ ತನಕ ಅಂದ್ರೆ ಸರ್ಕಾರಿ ಕಾರ್ಯಕ್ರಮ ನಿರೂಪಣೆ ಮತ್ತು ಸರ್ಕಾರಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ, ನಾಡಗೀತೆ ಮತ್ತು ರೈತ ಗೀತೆ ಹಾಡುವುದಕ್ಕೂ ಲಾಬಿ ನಡೆಯುತ್ತದೆ. ಬೇಕಿದ್ರೆ ಒಂದ್ಸಲ ಸರ್ಕಾರಿ ಕಾರ್ಯಕ್ರಮದ ಹಳೆ ವಿಡಿಯೋಗಳನ್ನು ತೆಗೆದು ನೋಡಿ ನಿರೂಪಕರು, ಗಾಯಕರು ಬದಲಾಗಿರುವುದೇ ಇಲ್ಲ. ಯಾಕೆ ಅಂದ್ರೆ ಇದು ಲಾಬಿ.
ಕನಿಷ್ಟ ಪಕ್ಷ ಹೊಸಬರಿಗೆ ಅವಕಾಶ ಕೊಡಬೇಕು, ಹೊಸಬರನ್ನು ಬೆಳೆಸಬೇಕು ಅನ್ನುವ ಮನೋಭಾವನೆ ನಮ್ಮ ರಾಜಕಾರಣಿಗಳಿಗಾಗಲಿ ಅಧಿಕಾರಿಗಳಿಗಾಗಲಿ ಇಲ್ಲ. ಹೀಗಾಗಿ ಅದೇ ಗಾಯಕರು, ಅದೇ ನಿರೂಪಕರು ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸುತ್ತಾರೆ. ಇನ್ನು ಗಾಯಕರ ವಿಷಯಕ್ಕೆ ಬಂದ್ರೆ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲು ಈ ವ್ಯವಸ್ಥೆಗೆ ಅದೇನು ದಾಡಿಯೋ ಗೊತ್ತಿಲ್ಲ.
ಇದೀಗ ಸರ್ಕಾರಿ ಕಾರ್ಯಕ್ರಮಗಳ ನಿರೂಪಕರು ಮತ್ತು ಗಾಯಕರ ಅವಕಾಶ ವಿಚಾರದಲ್ಲಿ ಸರ್ಕಾರ ಅನುಸರಿಸುತ್ತಿರುವ ಧೋರಣೆಯನ್ನು ಖಂಡಿಸಿ ಮಹಿಳೆಯೊಬ್ಬರು ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆ ಧರಣಿ ನಡೆಸಿದ್ದಾರೆ. ಈ ಸರ್ಕಾರ ಹೊಸಬರಿಗೆ ಅವಕಾಶ ನೀಡಬೇಕು. ಹಳೆ ನಿರೂಪಕರು ಹಾಗೂ ಗಾಯಕರಿಗೆ ಈ ಸರ್ಕಾರ ಮಣೆ ಹಾಕುತ್ತಿದೆ. ಹತ್ತಾರು ವರ್ಷಗಳಿಂದ ಅದೇ ಗಾಯಕರು ನಿರೂಪಕರಿದ್ದಾರೆ. ಹೀಗಾಗಿ ಹೊಸಬರಿಗೆ ಅವಕಾಶ ಕೊಡಿ ಎಂದು ಒತ್ತಾಯಿಸಿ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದರು.
ಹೊಸಬರಿಗೆ ಅವಕಾಶ ನೀಡುವಂತೆ ಆಗ್ರಹಿಸಿದ ಅವರ ದನಿ ಒಂಟಿ ದನಿಯಾಗಿತ್ತು ಅನ್ನುವುದು ವಿಪರ್ಯಾಸ. ಈ ಮಹಿಳೆಯ ಒಂಟಿ ದನಿಗೆ ಒಂದಿಷ್ಟು ಜನ ಸೇರಿದ್ರೆ ಖಂಡಿತಾ ಹೊಸ ಕಲಾವಿದರಿಗೆ, ಹೊಸ ನಿರೂಪಕರಿಗೆ ಅವಕಾಶ ದೊರೆಯುತ್ತದೆ. ದುರಂತ ಅಂದ್ರೆ ಪೊಲೀಸರು ಕಾನೂನು ಸುವ್ಯವಸ್ಥೆ ಕಾರಣದಿಂದ ಮಹಿಳೆಯರು ಪೊಲೀಸರಿಗೆ ಎಬ್ಬಿಸಿ ಕಳುಹಿಸಿದ್ದಾರೆ. ಹೀಗಾದ್ರೆ ಈ ವಿಷಯ ಮುಖ್ಯಮಂತ್ರಿಗಳಿಗೆ ಗೊತ್ತಾಗುವುದು ಹೇಗೆ.
Discussion about this post