ಬೆಂಗಳೂರು : ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ 6 ಬ್ಯಾಗ್ ಗಳನ್ನು ಒಯ್ದಿದ್ದು, ಅದರಲ್ಲಿ ಏನಿತ್ತು ಅನ್ನುವ ಬಗ್ಗೆ ಮುಖ್ಯಮಂತ್ರಿಗಳೇ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದರು.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಯಡಿಯೂರಪ್ಪ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳುವಾಗ ಆರು ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ ಅನ್ನುವ ಮಾಹಿತಿ ಸಿಕ್ಕಿದೆ. ಉಡುಗೊರೆಯನ್ನು ತೆಗೆದುಕೊಂಡು ಹೋಗಿದ್ದಾರೋ, ಅಥವಾ ಬೇರೆ ಏನು ತೆಗೆದುಕೊಂಡು ಹೋಗಿದ್ದಾರಾ ಎಂದು ಪ್ರಶ್ನಿಸಿದ್ದರು.
ಹೀಗಾಗಿ ಸಿಎಂ ತೆಗೆದುಕೊಂಡು ಹೋದ ಬ್ಯಾಗ್ ಗಳ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಅದರಲ್ಲೂ ಇಂಗ್ಲೀಷ್ ಮಾಧ್ಯಮಗಳು ಯಡಿಯೂರಪ್ಪ ಅವರ ಬ್ಯಾಗ್ ಗಳಲ್ಲಿ ಕಂತೆ ಕಂತೆ ನೋಟುಗಳಿವೆಯೇನೋ ಅನ್ನುವಂತೆ ಬರೆದಿತ್ತು.
ಆದರೆ ಇದೀಗ ಬ್ಯಾಗ್ ರಹಸ್ಯ ಬಯಲಾಗಿದ್ದು, ಯಡಿಯೂರಪ್ಪ ಅವರ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳುವ ಸಂದರ್ಭದಲ್ಲಿ ಒಯ್ದ ಬ್ಯಾಗ್ ಗಳಲ್ಲಿ ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರಿಗೆ ನೀಡಲು ಉಡುಗೊರೆಗಳಿತ್ತು ಎಂದು ಗೊತ್ತಾಗಿದೆ. ವಿವಿಧ ದೇವರ ವಿಗ್ರಹ ಹಾಗೂ ಹಾರಗಳನ್ನು ಈ ಬ್ಯಾಗ್ ನಲ್ಲಿ ಇಡಲಾಗಿತ್ತು ಎಂದು ಸಿಎಂ ಆಪ್ತರು ಹೇಳಿದ್ದಾರೆ.
Discussion about this post