ಬೆಂಗಳೂರು : ರಾಜ್ಯ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಶಾಸಕರಿಗೆ ಟೋಲ್ ಗಳಲ್ಲಿ ಪ್ರತ್ಯೇಕ ಪಥ, ದರ ಏರಿಕೆ ಯಾರ ಕಾಲದಲ್ಲಿ ಎಷ್ಟಾಯಿತು, ಜನಪ್ರತಿನಿಧಿಗಳ ದರವೂ ಏರಿಕೆಯಾಗಿದೆ. ಹೀಗೆ ರಾಜ್ಯದ ಜನತೆಯ ಉಪಯೋಗವೇ ಇಲ್ಲದ ವಿಷಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಈ ನಡುವೆ ರಾಜ್ಯದ 12 ಜಿಲ್ಲೆಗಳು ವೈರಾಣು ಜ್ವರದಿಂದ ತತ್ತರಿಸಿ ಹೋಗಿದೆ. ಆಸ್ಪತ್ರೆಗಳು ಭರ್ತಿಯಾಗಿದ್ದು,ಆಸ್ಪತ್ರೆಯ ಆವರಣದಲ್ಲಿ ಚಿಕಿತ್ಸೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳಲ್ಲಿ ಮಕ್ಕಳನ್ನು ಮಲಗಿಸಿಕೊಂಡು ವೈದ್ಯರಿಗೆ ಕಾಯುವ ಪರಿಸ್ಥಿತಿ ಇದೆ. ಆದರೆ ಅದ್ಯಾವ ಜನಪ್ರತಿನಿಧಿಯೂ ಈ ಬಗ್ಗೆ ವಿಧಾನಸಭೆಯಲ್ಲಿ ದನಿ ಎತ್ತೋದಿಲ್ಲ. ಇಂತಹ ಸಂಕಷ್ಟದಲ್ಲಿ ಆರೋಗ್ಯ ಸಚಿವರು ಜ್ವರ ಪೀಡಿತ ಜಿಲ್ಲೆಗಳಿಗೆ ತೆರಳಬೇಕು ಎಂದು ಆಗ್ರಹಿಸುವುದಿಲ್ಲ. ಯಾಕಂದ್ರೆ ಚಿಕಿತ್ಸೆಗಾಗಿ ಕಾಯುವ ಮಂದಿಯ ಅಗತ್ಯ ಅವರಿಗೆ ಈಗಿಲ್ಲ. ಚುನಾವಣೆ ಬಂದಾಗ ತಾನೇ ಬೇಕಾಗಿರುವುದು.
ಕೊರೋನಾ ಸೋಂಕಿನ ಮೂರನೇ ಅಲೆ ಮಕ್ಕಳನ್ನು ಕಾಡಲಿದೆ ಅನ್ನುವುದು ತಜ್ಞರ ವರದಿ. ಈ ನಡುವೆ ಬಳ್ಳಾರಿ, ಯಾದಗಿರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ,ರಾಯಚೂರು, ಬೀದರ್, ರಾಮನಗರ, ಚಿಕ್ಕಬಳ್ಳಾಪುರ, ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಕ್ಕಳು ನೆಗಡಿ ಕೆಮ್ಮು ಜ್ವರದಿಂದ ಬಳಲುತ್ತಿದ್ದಾರೆ. ಕಳೆದ 15 ದಿನಗಳಿಂದ ಜ್ವರಕ್ಕೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆಯೂ ಏರುತ್ತಿದೆ.
ಆದರೆ ವೈದ್ಯರ ಪ್ರಕಾರ, ಇದಕ್ಕೂ ಕೊರೋನಾ ಸೋಂಕಿಗೂ ಸಂಬಂಧವಿಲ್ಲ. ಮಳೆಗಾಲ ಕೊನೆಗೊಳ್ಳುವ ಸಮಯದಲ್ಲಿ ಈ ರೀತಿಯ ವೈರಾಣು ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಆತಂಕ ಬೇಡ ಅಂದಿದ್ದಾರೆ.
ಇನ್ನು ಈ ಭಾಗದ ಸರ್ಕಾರಿ ಆಸ್ಪತ್ರೆಗಳು ಮಕ್ಕಳಿಂದ ಭರ್ತಿಯಾಗಿದೆ. ಬೆಡ್ ಗಳ ಕೊರತೆ ಎದುರಾಗಿದೆ. ಹೀಗಾಗಿ ಆಸ್ಪತ್ರೆ ಆವರಣದಲ್ಲಿ ಮಕ್ಕಳನ್ನು ಮಲಗಿಸಿ ಬೆಡ್ ಕಾಯುವ ಪರಿಸ್ಥಿತಿ ಇದೆ. ಇನ್ನು ಕೆಲವು ಕಡೆ ನೆಲದಲ್ಲಿ ಬೆಡ್ ಹಾಕಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ ಕೆಲವು ಕಡೆ ಒಂದೇ ಹಾಸಿಗೆಯಲ್ಲಿ ಎರಡು ಮೂರು ಮಕ್ಕಳನ್ನು ಮಲಗಿಸಲಾಗಿದೆ. ಆದರೆ ಬೆಡ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವರು ಅದೇನು ಕ್ರಮ ಕೈಗೊಂಡಿದ್ದರೋ ಗೊತ್ತಿಲ್ಲ. ಮುಖ್ಯಮಂತ್ರಿಗಳ ಹಿಂದೇಯ ಓಡಾಡುವುದರಲ್ಲೇ ಬ್ಯುಸಿಯಾಗಿರುವ ಅವರಿಗೆ ಈ ಬಗ್ಗೆ ಗೊತ್ತಿದೆಯೋ ಇಲ್ಲವೋ..?
Discussion about this post