ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ವಿಶೇಷ ಅಭಿಯಾನ ಹಮ್ಮಿಕೊಂಡಿದ್ದರು. ಈ ಮೂಲಕ ಖಾಕಿ ಇಲಾಖೆಗೆ ಕರಾವಳಿ ಮಂದಿ ಹೆಚ್ಚು ಹೆಚ್ಚು ಸೇರುವಂತಾಗಬೇಕು ಎಂದು ಬಯಸಿದ್ದರು.
ಇದೀಗ ಕರಾವಳಿಯ ಮತ್ತೊಬ್ಬ ಪೊಲೀಸ್ ಅಧಿಕಾರಿ ನಗದು ಬಹುಮಾನ ಘೋಷಿಸುವ ಮೂಲಕ ಪೊಲೀಸ್ ಇಲಾಖೆಗೆ ಸೇರುವಂತೆ ಉತ್ತೇಜಿಸಲು ಮುಂದಾಗಿದ್ದಾರೆ. ಇವರ ಈ ಕಾರ್ಯಕ್ಕೆ ಪುತ್ತೂರಿನ ವಿದ್ಯಾಮಾತ ಅಕಾಡೆಮಿ ಕೈ ಜೋಡಿಸಿದೆ.
ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಹುದ್ದೆಯ 2021ರ ಸಾಲಿನ ನೇಮಕಾತಿಗೆ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಉಚಿತ ತರಬೇತಿಯನ್ನು ವಿದ್ಯಾಮಾತ ಅಕಾಡೆಮಿ ಆಯೋಜಿಸಿದೆ. ಈ ತರಬೇತಿಯು ಒಂದು ತಿಂಗಳ ಅವಧಿಯದಾಗಿದ್ದು ಸೆಪ್ಟಂಬರ್ 01 ರಿಂದ ಆರಂಭವಾಗಲಿದೆ.ಸೋಮವಾರದಿಂದ ಶುಕ್ರವಾರದ ವರೆಗೆ ವಾರದ ಐದು ದಿನ ಬೆಳಗ್ಗೆ 9 ಘಂಟೆಯಿಂದ ಮಧ್ಯಾಹ್ನ 1 ಘಂಟೆಯವರೆಗೆ ತರಬೇತಿ ತರಗತಿ ನಡೆಯಲಿದೆ.
ಪ್ರತಿ ದಿನ ಗಂಟೆಗೊಂಡರಂತೆ ನಾಲ್ಕು ವಿಷಯಗಳಿಗೆ ಸಂಬಂಧಿಸಿ ಒಟ್ಟು ನಾಲ್ಕು ತರಗತಿಗಳು ನಡೆಯಲಿವೆ. ಇತಿಹಾಸ, ಭೂಗೋಳ, ಭಾರತದ ಸಂವಿಧಾನ, ಅರ್ಥಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ ಮತ್ತು ಪ್ರಚಲಿತ ಘಟನೆ ಇಷ್ಟು ವಿಷಯಗಳ ಬಗ್ಗೆ ತರಗತಿಗಳು ನಡೆಯುತ್ತವೆ.ಸಾಯಂಕಾಲ 06ರಿಂದ 08ರವರೆಗೆ 2 ಘಂಟೆಗಳ ಆನ್ಲೈನ್ ತರಗತಿಗಳು (ಮಾನಸಿಕ ಸಾಮರ್ಥ್ಯ +ಅರ್ಥಶಾಸ್ತ್ರ+ಭೂಗೋಳ,) ದಿನಂಪ್ರತಿ ನಡೆಯುತ್ತವೆ.
ವಾರಾಂತ್ಯದ ದಿನ ಗುಂಪು ಚರ್ಚೆಗಳು, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಕಾರ್ಯಾಗಾರ, ಪ್ರಾಯೋಗಿಕ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ಈ ತರಬೇತಿಯ ಪ್ರಯೋಜನವನ್ನು ಯಾವುದೇ ಜಿಲ್ಲೆಯ ಅಭ್ಯರ್ಥಿಗಳು ಮುಕ್ತವಾಗಿ ಪಡೆದುಕೊಳ್ಳುವ ಅವಕಾಶವಿದೆ. PSI ದೈಹಿಕ ಕ್ಷಮತೆ ಪರೀಕ್ಷೆ ತೇರ್ಗಡೆ ಹೊಂದಿದ ಅಭ್ಯರ್ಥಿಗಳಲ್ಲದೆ ಈಗ ಪದವಿ ಮತ್ತು ಪದವೀ ಪೂರ್ವ ಶಿಕ್ಷಣ ಪಡೆಯುತ್ತಿರುವ ಮುಂದೆ ಪೊಲೀಸ್ ಇಲಾಖೆಗೆ ಸೇರುವ ಗುರಿ ಹೊಂದಿದ್ದು, ಅದಕ್ಕಾಗಿ ಪೂರ್ವತಯಾರಿ ನಡೆಸುವ ಉದ್ದೇಶ ಹೊಂದಿದವರಿದ್ದಲ್ಲಿ ಖುದ್ದು ಬಂದು ಮನವಿ ನೀಡಿದಲ್ಲಿ ಕೆಲ ಮಾನದಂಡಗಳ ಆಧಾರದಲ್ಲಿ ತರಬೇತಿಗೆ ಅವಕಾಶವಿದೆ.
ಈ ತರಬೇತಿಗೆ ಸಂಬಂಧಿಸಿ ಸೆಪ್ಟೆಂಬರ್ 15ರಂದು ಮಾದರಿ ಪ್ರಶ್ನೆ ಪತ್ರಿಕೆ 1 ಮತ್ತು 2 ರ ಪರೀಕ್ಷೆ ವಿದ್ಯಾಮಾತ ಅಕಾಡೆಮಿ ನಡೆಸಲಿದೆ. ಮಾದರಿ ಪ್ರಶ್ನೆ ಪತ್ರಿಕೆ 01 – 50 ಅಂಕ (ಪ್ರಬಂಧ+ಭಾಷಾಂತರ+ಸಂಕ್ಷಿಪ್ತ ಬರವಣಿಗೆ), ಮಾದರಿ ಪ್ರಶ್ನೆ ಪತ್ರಿಕೆ 2-150 ಅಂಕ (ಸೂಕ್ತ ಉತ್ತರವನ್ನು ಗುರುತಿಸುವುದು).
ಪೊಲೀಸ್ ನೇಮಕಾತಿಯಲ್ಲಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳನ್ನು ಉತ್ತೇಜಿಸುವ ದೃಷ್ಟಿಯಿಂದ ವಿದ್ಯಾಮಾತ ಅಕಾಡೆಮಿ ಆಯೋಜಿಸಿರುವ ಲಿಖಿತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ ಅಭ್ಯರ್ಥಿಗಳಿಗೆ ಬೆಳ್ಳಾರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿರವರು ಬಹುಮಾನವನ್ನು ಪ್ರಾಯೋಜಿಸಿದ್ದು ನಗದು ಬಹುಮಾನ ನೀಡಲಿದ್ದಾರೆ.50 ಅಂಕಗಳ ಪ್ರಶ್ನೆ ಪತ್ರಿಕೆ 1 ಕ್ಕೆ ಪ್ರಥಮ ಬಹುಮಾನ 3000 ಮತ್ತು ದ್ವಿತೀಯ 2000 ರೂಪಾಯಿಗಳು ಹಾಗೂ 150 ಅಂಕಗಳ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ 2 ಕ್ಕೆ ಪ್ರಥಮ 5000, ದ್ವಿತೀಯ 3000 ಹಾಗೂ ತೃತೀಯ 2000 ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. . ದೂರದ ಊರಿನ ಅಭ್ಯರ್ಥಿಗಳಿಗೆ ವಸತಿಗೆ ಸಹಕಾರ ಬೇಕಾದಲ್ಲಿ ಮಾಡಲಾಗುವುದು ಎಂದು ವಿದ್ಯಾಮಾತ ಅಕಾಡೆಮಿ ಮುಖ್ಯಸ್ಥರು ತಿಳಿಸಿದ್ದಾರೆ.
“ಪೊಲೀಸ್ ಇಲಾಖೆ ಸೇರಿದಲ್ಲಿ ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತದೆ. ಉತ್ತಮ ಶ್ರೇಣಿಯ ವೇತನ, ಮನೆ, ಆರೋಗ್ಯ ಭಾಗ್ಯದಂತಹಾ ಯೋಜನೆಗಳು ಲಭಿಸುತ್ತದೆ. ನಮಗೆ, ನಮ್ಮ ಕುಟುಂಬಕ್ಕೆ ಮನೆತನಕ್ಕೆ ಒಂದು ಗೌರವವನ್ನು ಪೊಲೀಸ್ ಇಲಾಖೆ ಮುಖಾಂತರ ಲಭಿಸುತ್ತದೆ. ಕಠಿಣ ಪರಿಶ್ರಮ ಹಾಕಿ ಓದಿ ಆಯ್ಕೆಯಾಗಿ ನಿಮ್ಮದೇ ಊರಿನ, ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಬಂದು ನಿಮ್ಮ ಊರಿನ ಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸುವ ಪರಿಹಾರ ಮಾಡುವ ಉತ್ತಮ ಆಡಳಿತ ನಡೆಸುವ ಕಾರ್ಯವನ್ನು ಮಾಡಬೇಕಾಗಿದೆ” ಎಂದು ಈ ಸಂದರ್ಭದಲ್ಲಿ ಆಂಜನೇಯ ರೆಡ್ಡಿಯವರು ತಾವು ವಿದ್ಯಾಮಾತ ಅಕಾಡೆಮಿಯೊಂದಿಗೆ ಕಾರ್ಯಕ್ರಮ ಪ್ರಾಯೋಜಿಸುತ್ತಿರುವ ಉದ್ದೇಶವನ್ನು ವಿವರಿಸಿದ್ದಾರೆ.
ಆಂಜನೇಯ ರೆಡ್ಡಿ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಹುಟ್ಟಿ ಶಿಕ್ಷಣ ಪಡೆದು 2005 ರಲ್ಲಿ ಪೊಲೀಸ್ ನೇಮಕಾತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯಕ್ಕೆ ಸೇರಿಕೊಂಡವರು. ಸುಮಾರು 12 ವರ್ಷಗಳ ಕಾಲ ಬಾಗೇಪಲ್ಲಿ, ಗೌರೀ ಬಿದನೂರು, ಚಿಕ್ಕಬಳ್ಳಾಪುರ ಮುಂತಾದ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಆ ಬಳಿಕ 2016 ರಲ್ಲಿ PSI ಪರೀಕ್ಷೆ ಬರೆದು 2017ರ ಬ್ಯಾಚ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ಹಾಜರಾದವರು.
ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿರುವುದರಿಂದ ಈ ಭಾಗದ ಜನ ಹೆಚ್ಚು ಹೆಚ್ಚು ಪೊಲೀಸ್ ಇಲಾಖೆಗೆ ಸೇರಿಕೊಳ್ಳಬೇಕೆಂಬ ಕಾರಣಕ್ಕಾಗಿ ಅಭ್ಯರ್ಥಿಗಳನ್ನು ಉತ್ತೇಜಿಸುವ ದೃಷ್ಟಿಯಿಂದ ದೈಹಿಕ ಕ್ಷಮತೆ ಪರೀಕ್ಷೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ವಿದ್ಯಾಮಾತ ಅಕಾಡೆಮಿ ನಡೆಸುವ ಲಿಖಿತ ಮಾದರಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸುವ ಅಭ್ಯರ್ಥಿಗಳಿಗೆ ನಗದು ಬಹುಮಾನವನ್ನು ಪ್ರಾಯೋಜಿಸಿದ್ದಾರೆ. ಒಂದು ತಿಂಗಳ ಉಚಿತ ತರಬೇತಿ ಪಡೆಯಲು ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪ್ರಮಾಣ ಪತ್ರದೊಂದಿಗೆ ಖುದ್ದಾಗಿ ವಿದ್ಯಾಮಾತ ಅಕಾಡೆಮಿಯಲ್ಲಿ ದಿನಾಂಕ 01-09-2021 ರ ಒಳಗಾಗಿ ಹೆಸರು ನೋಂದಾಣಿ ಮಾಡಬೇಕು.
ಉಚಿತ ತರಬೇತಿ ಪ್ರಾರಂಭ ದಿನಾಂಕ:ಸೆಪ್ಟೆಂಬರ್ 01-2021 . ಮಾದರಿ ಪ್ರಶ್ನೆ ಪತ್ರಿಕೆ ಪರೀಕ್ಷಾ ದಿನಾಂಕ-15-ಸೆಪ್ಟೆಂಬರ್ 2021 . ಮಾದರಿ ಪ್ರಶ್ನೆ ಪತ್ರಿಕೆಯ ಪರೀಕ್ಷೆಯಲ್ಲಿ ಭಾಗವಹಿಸಲು ದಿನಾಂಕ 10-ಸೆಪ್ಟೆಂಬರ್ 2021 ರ ಒಳಗಾಗಿ ಹೆಸರು ನೋಂದಾಣಿ ಮಾಡಬೇಕು.
ವಿಳಾಸ:
ವಿದ್ಯಾಮಾತ ಅಕಾಡೆಮಿ
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ
1ನೇ ಮಹಡಿ, ಹಿಂದುಸ್ತಾನ ಕಾಂಪ್ಲೆಕ್ಸ್, ಸಿಟಿ ಆಸ್ಪತ್ರೆ ಬಳಿ, ಎ. ಪಿ.ಎಂ.ಸಿ ರಸ್ತೆ, ಪುತ್ತೂರು. ದಕ್ಷಿಣ ಕನ್ನಡ – 574201
ಸಂಪರ್ಕ: 8590773486, 9620468869
Discussion about this post