ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಒಡೆತನದ ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ 5,251 ಕೋಟಿ ಸಾಲ ಹೊಂದಿರುವುದು ಗೊತ್ತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ದೊಡ್ಡ ಮೊತ್ತದ ಸಾಲ. ಕಳೆದ ವರ್ಷ ಸಾಲದ ಪ್ರಮಾಣ 2,457.3 ಕೋಟಿ ರೂಪಾಯಿಗಳಾಗಿತ್ತು.
ಷೇರುಪೇಟೆ ಮತ್ತು ಕಂಪನಿ ವ್ಯವಹಾರ ಸಚಿವಾಲಯಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಅಂಶವನ್ನು ನಮೂದಿಸಲಾಗಿದೆ.
ಈ ವರ್ಷದ ಸಾಲದ ಮೊತ್ತ ಏರಿಕೆಯಾಗಿರುವುದು ನೋಡಿದರೆ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು ಅನ್ನುವುದು ಸ್ಪಷ್ಟವಾಗುತ್ತದೆ.
ಇನ್ನು ಸಿದ್ಧಾರ್ಥ ಅವರು ತಮ್ಮ ಕಾಫಿಯೇತರ ವಹಿವಾಟಿಗೆ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದಾರೆ. ‘ಸಿಡಿಇಎಲ್’ನ ಪ್ರವರ್ತಕ ಕಂಪನಿಗಳಾದ ದೇವದರ್ಶಿನಿ ಇನ್ಫೊ ಟೆಕ್ನಾಲಜೀಸ್, ಕಾಫಿ ಡೇ ಕನ್ಸೊಲಿಡೇಷನ್ಸ್, ಗೋಣಿಬೀಡು ಕಾಫಿ ಎಸ್ಟೇಟ್ಸ್ ಮತ್ತು ಸಿವನ್ ಸೆಕ್ಯುರಿಟೀಸ್ ಕೂಡ ಕಾಲ ಕಾಲಕ್ಕೆ ದೊಡ್ಡ ಮೊತ್ತದ ಸಾಲ ಪಡೆದಿವೆ.
ಟಾಟಾ ಕ್ಯಾಪಿಟಲ್ ಫೈನಾನ್ಶಿಯಲ್ ಸರ್ವಿಸ್, ಕ್ಲಿಕ್ಸ್ ಕ್ಯಾಪಿಟಲ್ ಸರ್ವಿಸಸ್, ಶಪೂರ್ಜಿ ಪಲ್ಲೊಂಜಿ ಫೈನಾನ್ಸ್ನಿಂದಲೂ ಸಾಲ ಪಡೆಯಲಾಗಿದೆ. 2017ರಿಂದ ಸಾಲ ಪಡೆಯುವ ಪ್ರಮಾಣ ಹೆಚ್ಚಳಗೊಂಡಿದೆ.
ಸಿಡಿಇಎಲ್’ನಲ್ಲಿ ಸಿದ್ಧಾರ್ಥ ಅವರು ಶೇ 32.7, ಅವರ ಪತ್ನಿ ಮಾಳವಿಕಾ ಹೆಗ್ಡೆ ಶೇ 4.05 ಮತ್ತು ಇತರ ನಾಲ್ಕು ಪ್ರವರ್ತಕ ಸಂಸ್ಥೆಗಳು ಶೇ 17ರಷ್ಟು ಪಾಲು ಬಂಡವಾಳ ಹೊಂದಿವೆ.
ಪ್ರವರ್ತಕರ ಪಾಲಿನ ಈ ಪಾಲು ಬಂಡವಾಳದ ಶೇ 75.7ರಷ್ಟು (8.62 ಕೋಟಿ) ಷೇರುಗಳನ್ನು ಅಡಮಾನ ಇರಿಸಿ ಸಾಲ ಪಡೆಯಲಾಗಿದೆ. ಜೂನ್ ತಿಂಗಳಿನಲ್ಲಿಯೂ ಸಿದ್ಧಾರ್ಥ ಅವರು ಶೇ 1.39ರಷ್ಟು (29.2 ಲಕ್ಷ) ಷೇರುಗಳನ್ನು ಅಡಮಾನ ಇರಿಸಿ ಸಾಲ ಪಡೆದಿದ್ದಾರೆ.
ಇದು ಕಾಫಿ ಡೇ ವ್ಯವಹಾರ ಸಂಬಂಧಸಿದ ಸಾಲ. ಇನ್ನು ಸಿದ್ದಾರ್ಥ್ ಬೇರೆ ಉದ್ಯಮಗಳಿಗೆ ಸಾಲ ಪಡೆದಿರುವ ಮಾಹಿತಿ ಲಭ್ಯವಾಗಿಲ್ಲ. ಜೊತೆಗೆ ಖಾಸಗಿಯಾಗಿ ಪಡೆದ ಸಾಲದ ವಿವರಗಳು ಲಭ್ಯವಾಗಿಲ್ಲ.
Discussion about this post