ನವದೆಹಲಿ : ಅಮೆರಿಕಾದಲ್ಲಿ ಕೊರೋನಾ ಲಸಿಕಾ ಕಾರ್ಯಕ್ರಮ ಫಲ ನೀಡಿದ್ದು, ಈಗಾಗಲೇ ಎರಡು ಡೋಸ್ ಲಸಿಕೆ ಪಡೆದವರು ಮಾಸ್ಕ್ ಹಾಕದೆ ಬೀದಿ ಸುತ್ತಬಹುದಾಗಿದೆ. ಈ ನಡುವೆ ವಿಶ್ವದ ಮತ್ತೊಂದು ರಾಷ್ಟ್ರ ಕೊರೋನಾ ಮುಕ್ತವಾಗುವತ್ತ ಹೆಜ್ಜೆ ಹಾಕುತ್ತಿದೆ. ಅದುವೇ ಭಾರತದ ಪರಮಮಿತ್ರ ಇಸ್ರೇಲ್. ಇನ್ನೊಂದಿಷ್ಟು ವಾರ ಕಳೆದರೆ ಇಸ್ರೇಲ್ ಕೊರೋನಾ ಸೋಲಿಸುವುದು ಖಚಿತ.
ಹಾಗಾದರೆ ಇಸ್ರೇಲ್ ಕೊರೋನಾ ವಿರುದ್ಧದ ಹೋರಾಟದಲ್ಲಿ ಜಯಭೇರಿ ಬಾರಿಸಿದ್ದು ಹೇಗೆ ಅಂದ್ರೆ ಅದು ಸಖತ್ ಕುತೂಹಲಕಾರಿ ವಿಷಯ. ದೇಶದಲ್ಲಿ ಕೊರೋನಾ ಸೋಂಕು ಕಾಲಿಡುತ್ತಿದ್ದಂತೆ ಎಚ್ಚೆತುಕೊಂಡ ಇಸ್ರೇಲ್ ಶರವೇಗದಲ್ಲಿ ಟೆಸ್ಟಿಂಗ್ ಕಾರ್ಯ ಪ್ರಾರಂಭಿಸಿತ್ತು. ಯಾರಿಗೆಲ್ಲಾ ಪಾಸಿಟಿವ್ ಬರುತ್ತದೋ ಅವರ ಸಂಪರ್ಕಕ್ಕೆ ಬಂದವರನ್ನು ಟ್ರೇಸ್ ಮಾಡಲಾಗುತ್ತಿತ್ತು, ಜೊತೆಗೆ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿತ್ತು.
ಇದೇ ಕಾರಣಕ್ಕಾಗಿ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 8 ಲಕ್ಷದ ಗಡಿ ದಾಟಿದರೂ ಸಾವಿನ ಸಂಖ್ಯೆ 6 ಸಾವಿರದ ಅಸುಪಾಸಿನಲ್ಲಿತ್ತು. ಇನ್ನು ಇಸ್ರೇಲ್ ಡಿಸೆಂಬರ್ ನಲ್ಲಿ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು. ಸಂಪೂರ್ಣ ಡಿಜಿಟಲ್ ವ್ಯವಸ್ಥಯಲ್ಲೇ ಲಸಿಕೆ ವಿತರಣೆ ಕಾರ್ಯ ನಡೆದಿದ್ದು, ಈಗಾಗಲೇ 90 ಲಕ್ಷ ಜನಸಂಖ್ಯೆಯ ಪೈಕಿ 60 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಜೊತೆಗೆ 10 ಲಕ್ಷ ಮಂದಿಯಲ್ಲಿ ಸ್ವಾಭಾವಿಕವಾಗಿಯೇ ಹರ್ಡ್ ಇಮ್ಯೂನಿಟಿ ಬಂದಿದೆ ಎನ್ನಲಾಗಿದೆ. ಹೀಗಾಗಿ 70 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆಗಳಿಲ್ಲವಂತೆ. ಈ ಕಾರಣದಿಂದಲೇ ಇಸ್ರೇಲ್ ನಲ್ಲಿ ಮಾಸ್ಕ್ ಕಿತ್ತು ಬಿಸಾಕುವ ಕೆಲಸ ಪ್ರಾರಂಭವಾಗಿದೆ.
ಇನ್ನು ಕೊರೋನಾ ಲಸಿಕೆಯ ಎರಡು ಡೋಸ್ ಪಡೆದವರಿಗೆ ಗ್ರೀನ್ ಪಾಸ್ ನೀಡಲಾಗುತ್ತಿದ್ದು, ಈ ಪಾಸ್ ಪಡೆದವರು, ಹೋಟೆಲ್, ರೆಸ್ಟೋರೆಂಟ್, ಬೀಚ್, ಪಾರ್ಟಿ, ಪಬ್ ಗಳಿಗೆ ಸುತ್ತಾಡಬಹುದಾಗಿದೆ. ಹಾಗಂತ ಜನರಲ್ಲಿ ಆತಂಕ ದೂರವಾಗಿಲ್ಲ. ಎರಡು ಡೋಸ್ ಪಡೆದವರೂ ಗ್ರೀನ್ ಪಾಸ್ ಪಡೆದವರು ಮಾಸ್ಕ್ ಹಾಕಿಯೇ ಓಡಾಡುತ್ತಿದ್ದಾರೆ. ಕೆಲವರಿಗೆ ಇದು ಅಭ್ಯಾಸವಾಗಿ ಹೋಗಿದ್ರೆ, ಮತ್ತೆ ಕೆಲವರಿಗೆ ಭಯವೇ ಕಾರಣವಾಗಿದೆ.
ಆದರೆ ಇಸ್ರೇಲ್ ನ ಆತ್ಮೀಯ ರಾಷ್ಟ್ರವಾದ ಭಾರತದಲ್ಲಿ ಏನಾಗುತ್ತಿದೆ. ಇಸ್ರೇಲ್ ಪುಟ್ಟ ರಾಷ್ಟ್ರ, ಭಾರತ ದೊಡ್ಡ ರಾಷ್ಟ್ರ ಅನ್ನುವ ವಾದವನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಪರಮಮಿತ್ರ ರಾಷ್ಟ್ರದಿಂದ ಭಾರತ ಕಲಿಯೋದು ಸಾಕಷ್ಟಿದೆ.
ಕನಿಷ್ಟ ಪಕ್ಷ ಕೊರೋನಾ ಲಸಿಕೆಯನ್ನು ಹೆಚ್ಚು ಜನ ಪಡೆಯುವಂತೆ ಮಾಡಬೇಕು. ಇದಕ್ಕಾಗಿ ಕಡ್ಡಾಯ ಲಸಿಕೆಯ ಬದಲಾಗಿ ಪರ್ಯಾಯ ಮಾರ್ಗಗಳನ್ನು ಸರ್ಕಾರ ಯೋಚಿಸಬೇಕಾಗಿದೆ. ಜೊತೆಗೆ ಲಸಿಕೆ ಹಾಕಲು ಬರೋ ಮಂದಿ ಲಸಿಕೆ ಸ್ಟಾಕ್ ಇಲ್ಲ ಅನ್ನುವ ಕಾರಣಕ್ಕಾಗಿ ಆರೋಗ್ಯ ಕೇಂದ್ರಗಳಿಂದ ವಾಪಾಸ್ ಹೋಗುವಂತಾಗಬಾರದು.
Discussion about this post