ಉಡುಪಿ : ಸದಾ ಸುದ್ದಿಯಲ್ಲಿ ಅಷ್ಟ ಮಠಗಳ ಪೈಕಿ ಒಂದಾದ ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸದಾ ಸುದ್ದಿಯಲ್ಲಿದ್ದರು. ಅವರ ಕೆಲಸ ಕಾರ್ಯಗಳು ಸಿಕ್ಕಾಪಟ್ಟೆ ವಿಭಿನ್ನವಾಗಿದ್ದ ಕಾರಣ ಪತ್ರಿಕೆಗಳಲ್ಲಿ ಫೋಟೋ ಬರೋದು ತಪ್ಪುತ್ತಿರಲಿಲ್ಲ. ಆದರೆ ಈ ಪ್ರಚಾರದ ಭರಾಟೆಯ ನಡುವೆ ಮಠದೊಳಗೆ ಏನು ನಡೆಯುತ್ತಿದೆ ಅನ್ನುವುದು ಭಕ್ತರಿಗೆ ತಿಳಿಯಲೇ ಇಲ್ಲ.
ಶ್ರೀ ಲಕ್ಷ್ಮೀವರ ತೀರ್ಥರು ವೃಂದಾವನಸ್ಥರಾದ ಮೇಲೆ ಹುಟ್ಟಿಕೊಂಡ ಕಥೆಗಳು ಒಂದಲ್ಲ ಎರಡಲ್ಲ. ಅದರಲ್ಲಿ ಸುಳ್ಳೆಷ್ಟು ಸತ್ಯವೆಷ್ಟು ಅನ್ನುವುದು ಮೂಲದೇವರಿಗೆ ಮಾತ್ರ ಗೊತ್ತು. ಆದರೆ ಮಠ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು ಅನ್ನುವುದು ಮಾತ್ರ ಸತ್ಯ. ಇಂತಹ ಸಂದರ್ಭದಲ್ಲಿ ಶೀರೂರು ಮಠದ ಆಡಳಿತ ಚುಕ್ಕಾಣಿ ಹಿಡಿದದ್ದು ದ್ವಂದ ಮಠವಾದ ಸೋದೆ.
ಸೋದೆಯ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಶೀರೂರು ಮಠದ ಚಟುವಟಿಕೆಗಳನ್ನು ಕೈಗೆತ್ತಿಕೊಂಡರೆ ಅದು ಚಕ್ರವ್ಯೂಹವಾಗಿತ್ತು. ಮುಟ್ಟಲು ಹೋದರೆ ಕಚ್ಚಲು ಬರೋ ಪರಿಸ್ಥಿತಿ. ಹಾಗಂತ ಹಾಗೇ ಬಿಡುವಂತಿರಲಿಲ್ಲ. ನಾಳೆ ಭಕ್ತರು ಕೇಳೋ ಪ್ರಶ್ನೆಗಳಿಗೆ ಉತ್ತರ ಕೊಡುವ ಜವಾಬ್ದಾರಿ ವಿಶ್ವವಲ್ಲಭತೀರ್ಥರ ಮೇಲಿತ್ತು.
ಇದನ್ನೂ ಓದಿ : ಕೃಷ್ಣ ಮಠದಲ್ಲಿದ್ದ ಶೀರೂರಿನ ಪಟ್ಟದೇವರಿಗೆ ಸಿಕ್ತು ಬಿಡುಗಡೆ ಭಾಗ್ಯ
ಹಾಗಿದ್ದರೂ ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡದ ವಿಶ್ವವಲ್ಲಭತೀರ್ಥರು, ಶೀರೂರು ಮಠವನ್ನು ಸಮಸ್ಯೆ ಮುಕ್ತವಾಗಿಸಲು ಪಣತೊಟ್ಟರು. ಒಂದೊಂದೋ ಯೋಚನೆಗಳಿಗೆ ಯೋಜನೆಯ ರೂಪ ಕೊಟ್ಟರು. ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ಕನಕ ಮಹಲ್ ವಿವಾದವನ್ನು ಬಗೆ ಹರಿಸಿದರು. ಕನಕ ಮಹಲ್ ಗೆ ಸಂಬಂಧಿಸಿದ ಉದ್ಯಮಿಯೊಂದಿಗೆ ಮಾತುಕತೆ ನಡೆಸಿ ಕಾರ್ಪೋರೇಷನ್ ಬ್ಯಾಂಕ್ ನ ಸಾಲದ ಹೊರೆಯಿಂದ ಮಠವನ್ನು ಮುಕ್ತರಾಗಿಸಿದರು.
ಇದನ್ನೂ ಓದಿ : ಶೀರೂರು ಶ್ರೀ ಸಾವಿನ ಬೆನ್ನಲ್ಲೇ ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳಿಗೆ ತಲೆ ನೋವು
ಶೀರೂರು ಮಠದ ಮುಂದೆ ಹಡಿಲ್ ಬಿದ್ದ ಜಾಗದಲ್ಲಿ ಕೃಷಿ ಚಟುವಟಿಕೆಯನ್ನು ಕೈಗೆತ್ತಿಕೊಂಡರು. ಈ ಮೂಲಕ ಮುಂದೆ ಯತಿಗಳಾಗಿ ಬರುವವರು ಮಾಡಬೇಕಾಗಿರುವುದೇನು ಅನ್ನುವುದಕ್ಕೊಂದು ನೀಲ ನಕ್ಷೆ ಮಾಡಿಕೊಟ್ಟರು. ಜೊತೆಗೆ ಹಿರಿಯಡ್ಕ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವಂತೆ ಕಲ್ಯಾಣ ಮಂಟಪವೊಂದನ್ನು ನಿರ್ಮಾಣ ಮಾಡಿದರು. ಜೊತೆಗೆ ಶೀರೂರು ಮಠದ ನಿರ್ವಹಣೆ ಹಾಗೂ ಧರ್ಮಪ್ರಚಾರದ ಸಲುವಾಗಿ ನಿರಂತರ ಆದಾಯದ ಮೂಲಬೇಕಾಗಿತ್ತು. ಇದಕ್ಕಾಗಿ ಈ ಹಿಂದೆ ಮಠದ ಕೈ ತಪ್ಪಿ ಹೋಗಿದ್ದ ಆದಾಯದ ಮೂಲಗಳಿಗೆ ಜೀವ ತುಂಬಿದರು.
ಕೇವಲ ಹಣಕಾಸು ಯೋಜನೆಗಳು ಮಾತ್ರವಲ್ಲದೆ, ಶೀರೂರು ಮಠದ ಶಾಖಾ ಮಠವಾಗಿರುವ ಶೀರೂರು ಸಮೀಪವೇ ಇರುವ ಸಾಂತ್ಯಾರು ಮಠ ಪಾಳು ಬಿದ್ದು ಹೋಗಿತ್ತು. ಶ್ರೀಗೋಪಾಲಕೃಷ್ಣ ಮುಖ್ಯ ಪ್ರಾಣ ಹಾಗೂ ಶಕ್ತಿದೇವತೆಗಳ ಸನ್ನಿಧಾನ ಜೀರ್ಣಾವಸ್ಥೆ ತಲುಪಿತ್ತು. ಭಕ್ತರ ಜೊತೆಗೆ ಸತತ ಸಭೆ ನಡೆಸಿದ ಸೋದೆ ಶ್ರೀಗಳು ಮಠವನ್ನು ಜೀರ್ಣೋದ್ಧಾರಗೊಳಿಸಿ ಧಾರ್ಮಿಕ ಆಚರಣೆಗಳನ್ನು ಮತ್ತೆ ಆರಂಭಿಸುವ ಕುರಿತಂತೆ ಮುನ್ನುಡಿ ಬರೆದಿದ್ದಾರೆ.
ಇದನ್ನೂ ಓದಿ : ಕೊನೆಗೂ ಶಿರೂರು ಮಠಕ್ಕೆ ಪೀಠಾಧಿಪತಿ : ಸೋದೆ ಮಠದ ಶ್ರೀಗಳ ತಾಕತ್ತು ಮೆಚ್ಚಲೇಬೇಕು
ಒಟ್ಟಿನಲ್ಲಿ ಶೀರೂರು ಮಠಕ್ಕೆ ನೂತನ ಯತಿಗಳಾಗಿ ಬರುವವರಿಗೆ ಸಾಲದ ಹೊರೆ ಇರಬಾರದು ಅನ್ನುವುದು ಸೋದೆ ಶ್ರೀಗಳ ತೀರ್ಮಾನವಾಗಿತ್ತು. ನೂತನ ಯತಿಗಳಾಗಿ ಬರುವವರು ಮಠದ ಕಾನೂನು ಹೋರಾಟ, ಹಣಕಾಸಿನ ವ್ಯವಹಾರದ ಬಡಿದಾಟಕ್ಕೆ ನಿಂತ್ರೆ ಧರ್ಮ ಪ್ರಚಾರ ಮಾಡೋದು ಯಾವಾಗ, ಧಾರ್ಮಿಕ ಕಾರ್ಯಕ್ರಮ ನಡೆಸೋದು ಯಾವಾಗ, ಹೀಗಾಗಿ ಯತಿಗಳಾಗಿ ಬರುವವರ ಉದ್ದೇಶವೇ ಬೇರೆಯಾಗಿರುವಾಗ, ಊರ ಊಸಾಬರಿ ಇರಬಾರದು ಅನ್ನುವ ಕಾರಣಕ್ಕಾಗಿಯೇ ಇದೀಗ ಶೀರೂರು ಮಠವನ್ನು ಸ್ವಾವಲಂಬಿಯನ್ನಾಗಿ ಮಾಡುವತ್ತ ಹೆಜ್ಜೆ ಇಡಲಾಗಿದೆ. ಶೀರೂರು ಶ್ರೀಗಳು ಮಾಡಿದ ಒಂದಿಷ್ಟು ಒಳ್ಳೆಯ ಕೆಲಸಗಳ ಜೊತೆಗೆ ಮತ್ತಷ್ಟು ಯೋಜನೆಗಳು ಸೇರಿಸಿ ಶೀರೂರು ಮಠಕ್ಕೊಂದು ಹೊಸ ಲುಕ್ ನೀಡಲಾಗಿದೆ.
Discussion about this post