ಉಡುಪಿ : ಕೊರೋನಾ ನಿಯಮ ಪಾಲಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ನಡು ರಸ್ತೆಯಲ್ಲೇ ಬಸ್ ನಿಂದ ಇಳಿಯುವಂತೆ ಮಾಡಿದ್ದ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ರೈತರಿಗೆ ಶಾಕಿಂಗ್ ಸುದ್ದಿಯೊಂದನ್ನು ಕೊಟ್ಟಿದ್ದಾರೆ.
ವಿದ್ಯಾರ್ಥಿಗಳನ್ನು ನಡುರಸ್ತೆಯಲ್ಲಿ ಇಳಿಸಿದ್ದ ಜಿಲ್ಲಾಧಿಕಾರಿಗಳು ಅವರಿಗೊಂದು ಪರ್ಯಾಯ ವ್ಯವಸ್ಥೆ ಮಾಡಿರಲಿಲ್ಲ. ಮೊದಲೇ ಸಾರಿಗೆ ಸಂಸ್ಥೆ ನೌಕರರ ಮುಷ್ಕರ, ಕೊರೋನಾ ಕಾರಣದಿಂದ ಖಾಸಗಿ ಬಸ್ ಗಳು ಕೂಡಾ ಸೀಮಿತ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿವೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ಒಳ್ಳೆಯ ಜಿಲ್ಲಾಧಿಕಾರಿಯೊಂದು ಹೆಸರು ಪಡೆದವರ ಕೆಲಸ ಟೀಕೆಗೆ ಗುರಿಯಾಗಿತ್ತು.
ಇದೀಗ ಎರಡು ವರ್ಷಗಳ ಕಾಲ ಹಡಿಲು ಬಿಟ್ಟ ಕೃಷಿ ಭೂಮಿಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕಾಗುತ್ತದೆ ಅನ್ನುವ ಎಚ್ಚರಿಕೆಯನ್ನು ರೈತರಿಗೆ ಜಿ.ಜಗದೀಶ್ ಕೊಟ್ಟಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಹಡಿಲು ಭೂಮಿ ಕೃಷಿ ಆಂದೋಲನದ ಭಾಗವಾಗಿ ಗದ್ದೆಗಳಿಗೆ ಸರಾಗವಾಗಿ ನೀರು ಹರಿದು ಹೋಗಲು ತೋಡುಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಹಡಿಲು ಬಿಟ್ಟಿರುವ ಭೂಮಿಯನ್ನು ಗುರುತಿಸುವಂತೆ ಈಗಾಗಲೇ ತಹಶೀಲ್ದಾರ್ ಗಳಿಗೆ ಸೂಚಿಸಲಾಗಿದೆ. ಎರಡು ವರ್ಷಗಳ ಕಾಲ ಹಡಿಲು ಬಿಟ್ಟಿರುವ ಕೃಷಿ ಭೂಮಿಯನ್ನು ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಹಡಿಲು ಬಿಟ್ಟಿರುವ ಭೂಮಿಯನ್ನು ಗುರುತಿಸಿದ ಬಳಿಕ ಹಂತ ಹಂತವಾಗಿ ಹಡಿಲು ಬಿಟ್ಟಿರುವ ಭೂ ಮಾಲೀಕರಿಗೆ ನೋಟೀಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಕೃಷಿ ಚಟುವಟಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕ್ರಮ ಚೆನ್ನಾಗಿದೆ. ಆದರೆ ರೈತರು ಹಡಿಲು ಬಿಡಲು ಕಾರಣವೇನು ಅನ್ನುವುದನ್ನು ಜಿಲ್ಲಾಡಳಿತ ಮೊದಲು ಅರಿತುಕೊಳ್ಳುವ ಅಗತ್ಯವಿದೆ. ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡುವ ಹೊಣೆಯನ್ನು ಜಿಲ್ಲಾಡಳಿತ ಹೊತ್ತುಕೊಳ್ಳಬೇಕು.
ಹೀಗೆಲ್ಲಾ ನೋಟೀಸ್ ಕೊಡಲು ಬದಲು ರೈತನ ಮನೆಗೆ ಬಾಗಿಲಿಗೆ ಜಿಲ್ಲಾಡಳಿತವೇ ಹೋಗಿ, ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುವಂತೆ ಮನವೊಲಿಸುವುದು, ಪ್ರೇರೆಪಿಸುವುದು ಉತ್ತಮವಲ್ಲವೇ. ಹಾಗೇ ಮಾಡಿದರೆ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಾತು ಎತ್ತಿದ್ರೆ ರೈತರ ಪರವಾಗಿ ಮಾತನಾಡುವ ಯಡಿಯೂರಪ್ಪ ಅವರಿಗೆ ಗೌರವ.
Discussion about this post