ಬೆಂಗಳೂರು : ರಾಜ್ಯ ಬಿಜೆಪಿ ಬಂಡಾಯ ಪ್ರಹಸನಕ್ಕೆ ಶಾಸಕ ಎಚ್. ವಿಶ್ವನಾಥ್ ತುಪ್ಪ ಸುರಿದಿದ್ದಾರೆ. ಇಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿದ್ದು, ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಆರೋಗ್ಯವೂ ಸಹಕರಿಸುತ್ತಿಲ್ಲ. ಜೊತೆಗೆ ಹಳೆಯ ತಾಕತ್ತು ಕೂಡಾ ಈಗಿಲ್ಲ. ಈ ಕಾರಣದಿಂದ ಹೊಸ ನಾಯಕತ್ವಕ್ಕೆ ಅವರು ಮನವಿ ಮಾಡಿದ್ದಾರೆ.
ಇದೇ ವೇಳೆ ಹೊಸ ಮುಖ್ಯಮಂತ್ರಿ ಸ್ಥಾನಕ್ಕೆ ಮೂರು ಹೆಸರುಗಳನ್ನು ಸೂಚಿಸಿರುವ ವಿಶ್ವನಾಥ್ ಯುವಕ ಬೇಕು ಅಂದ್ರೆ ಅರವಿಂದ್ ಬೆಲ್ಲದ್ ಇದ್ದಾರೆ, ಮಧ್ಯ ವಯಸ್ಕ ಬೇಕು ಅಂದ್ರೆ ಯತ್ನಾಳ್ ಇದ್ದಾರೆ. ಕಾಮನ್ಸೆನ್ ಇರುವವರು, ಎಲ್ಲರನ್ನೂ ಹೊಂದಾಣಿಕೆ ಮಾಡುವವರು ಬೇಕು ಅಂದ್ರೆ ನಿರಾಣಿ ಇದ್ದಾರೆ. ಒಟ್ಟಿನಲ್ಲಿ ಪಂಚಮಸಾಲಿ ಲಿಂಗಾಯಿತರೊಬ್ಬರನ್ನು ಸಿಎಂ ಮಾಡಿ ಅಂದಿದ್ದಾರೆ.
ಇದೇ ವೇಳೆ ಯಡಿಯೂರಪ್ಪ ಅವರ ಸೇವೆಯನ್ನು ಸ್ಮರಿಸಿರುವ ವಿಶ್ವನಾಥ್, ರಾಜ್ಯದಲ್ಲಿ ಎಲ್ಲರಿಗೂ ಯಡಿಯೂರಪ್ಪ ಬಗ್ಗೆ ಗೌರವ ಇದೆ, ಸಿಎಂ ಆಗಿ ಶಾಸಕರಾಗಿ, ಪ್ರತಿಪಕ್ಷ ನಾಯಕರಾಗಿ ಅವರು ಮಾಡಿದ ಕೆಲಸದ ಬಗ್ಗೆ ಗೌರವವಿದೆ.ಆದರೆ ಈಗ ಇಲ್ಲಿ ಪ್ರಶ್ನೆ ಯಡಿಯೂರಪ್ಪನವರದಲ್ಲ. ಸರ್ಕಾರದ್ದಾಗಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರದ ಬಗ್ಗೆ ಜನ ಕೇವಲವಾಗಿ ಮಾತನಾಡುತ್ತಿದ್ದಾರೆ. ಮೋದಿ ಕಾರ್ಯಕ್ರಮವನ್ನು ರಾಜ್ಯದ ಜನ ಮರೆತಿದ್ದಾರೆ. ಬಿಜೆಪಿ ಹಾಗೂ ಬಿಜೆಪಿ ನಾಯಕರು ಮೋದಿಯನ್ನು ಮರೆತಿದ್ದಾರೆ. ಹೀಗಾಗಿ ಪಕ್ಷದ ವರ್ಚಸ್ಸು ಮತ್ತೆ ಹೆಚ್ಚಬೇಕಾದರೆ ಸಿಎಂ ಬದಲಾವಣೆಯೊಂದೇ ಮಾರ್ಗ ಅಂದಿದ್ದಾರೆ.
Discussion about this post