ಮೈಸೂರು : ಸಂಜೆ ಗಡಿಯಾರದ ಮುಳ್ಳು 5 ಗಂಟೆ ಎಂದು ತೋರಿಸಿದರೆ ಸಾಕು, ಮೈಸೂರಿನ ಕೌಟಿಲ್ಯ ಸರ್ಕಲ್ ನಲ್ಲಿ ಟ್ರಾಫಿಕ್ ವಾರ್ಡನ್ ಒಬ್ಬರು ಪ್ರತ್ಯಕ್ಷರಾಗಿ ಬಿಡುತ್ತಾರೆ. ಟ್ರಾಫಿಕ್ ಪೊಲೀಸರ ಸಮವಸ್ತ್ರವನ್ನೇ ಹೋಲುವ ಸಮವಸ್ತ್ರದೊಂದಿಗೆ ಹಾಜರಾಗುವ ಇವರು 7 ಗಂಟೆಯ ತನಕ ಟ್ರಾಫಿಕ್ ನಿಯಂತ್ರಣ ಕಾರ್ಯನಿರ್ವಹಿಸುತ್ತಾರೆ. ಈ ವೇಳೆ ಒಂದೇ ಒಂದು ಬ್ರೇಕ್ ಪಡೆಯೋದಿಲ್ಲ.
ಇನ್ನು ಕೊರೋನಾ ಸಮಯದ 9 ತಿಂಗಳಲ್ಲಿ ಸಂಜೆ 5 ರಿಂದ 7ರವರೆಗೆ ಮಾತ್ರವಲ್ಲದೆ ಬೆಳಗ್ಗೆಯೂ ಬಂದು ಕೆಲಸ ನಿರ್ವಹಿಸಿದ್ದರು.
ಅಂದ ಹಾಗೇ ಇವರ ಹೆಸರು ಮಹೇಶ್ವರ, ಕಳೆದ ಮೂರು ದಶಕಗಳಿಂದ ಸಾಂಸ್ಕೃತಿಕ ನಗರಿಯಲ್ಲಿ ಟ್ರಾಫಿಕ್ ವಾರ್ಡನ್ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರ ಕಾರ್ಯವೈಖರಿಯನ್ನು ನೋಡಿದ್ರೆ ಅನುಭವಿ ಪೊಲೀಸ್ ಅಧಿಕಾರಿಗಳೇ ತಲೆ ಸುತ್ತಿ ಬೀಳಬೇಕು, ಇಳಿ ವಯಸ್ಸಿನಲ್ಲೂ ಇವರ ತಾಕತ್ತು ಪುಟಿದೇಳುವ ಚಿಲುಮೆ.
ಮಹೇಶ್ವರ ಅವರು ಹಲವು ವರ್ಷಗಳ ಕಾಲ ಪೇಪರ್ ಏಜೆಂಟ್ ಆಗಿ ಕೆಲಸ ಮಾಡಿದ್ದರು. ಬಳಿಕ ವಿಮಾ ಕಂಪನಿಯೊಂದಕ್ಕೆ ಸೇರಿಕೊಂಡರು. ಈ ನಡುವೆ 1984ರಲ್ಲಿ ಮೈಸೂರಿನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಾಮಮೂರ್ತಿಯವರು ದಸರಾ ಭದ್ರತೆ ಸಲುವಾಗಿ ಸ್ವಯಂ ಸೇವಕರನ್ನು ಬಯಸಿದ್ದರು. ಈ ಸಂದರ್ಭದಲ್ಲಿ ರಾಮಮೂರ್ತಿ ಕೂಡಾ ಪೊಲೀಸರೊಂದಿಗೆ ದಸರೆಯ ಭದ್ರತೆಯ ಕೆಲಸ ನಿರ್ವಹಿಸಿದ್ದರು. ಹೀಗೆ ಪೊಲೀಸರೊಂದಿಗೆ ಕಾರ್ಯನಿರ್ವಹಿಸಿದ ಅನುಭವ ಪಡೆದ ನಾನ್ಯಾಕೆ ಪೊಲೀಸರ ಕೆಲಸಕ್ಕೆ ಸಹಕಾರ ನೀಡಬಾರದು ಎಂದು ಯೋಚಿಸಿದರು. ಅದರಂತೆ ಮೈಸೂರು ನಗರದ ಬೇರೆ ಬೇರೆ ಪ್ರಮುಖ ಸರ್ಕಲ್ ಗಳಲ್ಲಿ ಟ್ರಾಫಿಕ್ ನಿಯಂತ್ರಿಸುವ ಜವಾಬ್ದಾರಿಯನ್ನು ಸ್ವಯಂ ಪ್ರೇರಿತರಾಗಿ ವಹಿಸಿಕೊಂಡರು,
ಕಳೆದ ಕೆಲವು ವರ್ಷಗಳಿಂದ ಕೌಟಿಲ್ಯ ಸರ್ಕಲ್ ನಲ್ಲೇ ನಿಂತು ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ತಾವ್ಯಾಕೆ ಈ ಕೆಲಸಕ್ಕೆ ಬಂದೆ ಅನ್ನುವುದನ್ನು ವಿವರಿಸುವ ಮಹೇಶ್ವರ್, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಅನ್ನುವುದು ನನ್ನ ಹಂಬಲವಾಗಿತ್ತು. ಈ ವೇಳೆ ಮೈಸೂರು ದಸರೆಯಲ್ಲಿ ಸಿಕ್ಕ ಅವಕಾಶ ಸಮಾಜ ಸೇವೆಗೊಂದು ಒಳ್ಳೆಯ ದಾರಿ ಅನ್ನಿಸಿತು. ಬಳಿಕ ಪೊಲೀಸರಿಗೆ ನೆರವಾಗುವ ಮೂಲಕ ಈ ಸೇವೆಯನ್ನು ಮುಂದುವರಿಸಿದ್ದೇನೆ ಅನ್ನುತ್ತಾರೆ.
ಆದರೆ ಇವರು 1984ರ ಹೊತ್ತಿಗೆ ಟ್ರಾಫಿಕ್ ನಿಯಂತ್ರಿಸುವ ಕೆಲಸ ಪ್ರಾರಂಭಿಸಿದಾಗ ಟ್ರಾಫಿಕ್ ವಾರ್ಡನ್ ಅನ್ನೋ ಕಾನ್ಸ್ ಪ್ಟ್ ಇರಲಿಲ್ಲ. 1991 -92ರ ಹೊತ್ತಿಗೆ ಟಾಫಿಕ್ ವಾರ್ಡನ್ ಪರಿಚಯವಾಗಿದ್ದು, ಆದರೆ ಅದಕ್ಕಿಂತ ಮುಂಚೆಯೇ ಟ್ರಾಫಿಕ್ ವಾರ್ಡನ್ ಆಗಿದ್ದ ಹಿರಿಮೆ ಇವರದ್ದು. ಈ ಕಾರಣದಿಂದ ಇವರಿಗೂ ಇಂದಿಗೂ ಎಂದೆಂದಿಗೂ ಹಿರಿಯ ಟ್ರಾಫಿಕ್ ವಾರ್ಡನ್.
Discussion about this post