ಬೆಂಗಳೂರು : ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಇದೊಂದು ಹಿಂದೂ ವಿರೋಧಿ ಸರ್ಕಾರ ಅನ್ನುವ ಆರೋಪಕ್ಕೆ ಗುರಿಯಾಗಬೇಕಾಗಿ ಬಂದಿದೆ. ಕೆಲವರು ಸಿದ್ದರಾಮಯ್ಯ ಸರ್ಕಾರಕ್ಕೂ ಬೊಮ್ಮಾಯಿ ಸರ್ಕಾರಕ್ಕೂ ವ್ಯತ್ಯಾಸವೇನಿದೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಪಠ್ಯ ಪುಸ್ತಕಗಳಲ್ಲಿ ಓದಿದ ದೇವಸ್ಥಾನಗಳ ಮೇಲಿನ ದಾಳಿಯನ್ನು ಕಣ್ಣಾರೆ ನೋಡುವಂತಾಯ್ತು ಅಂದಿದ್ದಾರೆ.
ಇದಕ್ಕೆ ಕಾರಣವಾಗಿರೋದು ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ದೇವಸ್ಥಾನ ತೆರವು ಕಾರ್ಯಾಚರಣೆ. ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಾರಂಭವಾದ ಕಾರ್ಯಾಚರಣೆಗೆ ಇದೀಗ ತಾತ್ಕಾಲಿಕ ತಡೆ ಸಿಕ್ಕಿದೆ. ಆದರೆ ಅಷ್ಟು ಹೊತ್ತಿಗೆ ಅನೇಕ ದೇವಸ್ಥಾನಗಳನ್ನು ನೆಲಸಮ ಮಾಡಿಯಾಗಿದೆ.
ದೇವಸ್ಥಾನ ನೆಲಸಮ ಪ್ರಾರಂಭವಾದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದರು. 500 600 ವರ್ಷದ ಇತಿಹಾಸವಿರುವ ದೇವಸ್ಥಾನ ನೆಲಸಮ ಮಾಡಲು ನೋಟಿಫಿಕೇಶನ್ ಮಾಡಿದ್ದರೂ ಅದ್ಯಾವ ಶಾಸಕನೂ ತುಟಿ ಬಿಚ್ಚಿರಲಿಲ್ಲ. ಯಾವಾಗ ಸಂಸದ ಪ್ರತಾಪ್ ಸಿಂಹ ಎದ್ದು ನಿಂತರೋ ಹೋರಾಟ ಪ್ರಾರಂಭವಾಯ್ತು. ಇದೀಗ ದೇವಸ್ಥಾನ ದಂಗಲ್ ವಿಚಾರ ಬಿಜೆಪಿ ಪಕ್ಷಕ್ಕೆ ಮುಳುವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಧರ್ಮ ಸೂಕ್ಷ್ಮ ವಿಚಾರದಲ್ಲಿ ಬಿಜೆಪಿ ನಡೆದುಕೊಂಡ ರೀತಿಗೆ ತಕ್ಕ ಉತ್ತರವನ್ನು ಮತದಾರ ಕೊಡಲಿದ್ದಾನೆ. ಹಾಗಂತ ಅದು ಕಾಂಗ್ರೆಸ್ ನಡೆಯ ಮೇಲೆ ನಿಂತಿದೆ. ಇದೇ ದೇವಸ್ಥಾನ ನೆಲಸಮವಾಗುವ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಿದಲ್ಲಿರುತ್ತಿದ್ರೆ ಪರಿಸ್ಥಿತಿ ಹೇಗಿರುತ್ತಿತ್ತು. ರಾಜ್ಯದ ಮೂಲೆ ಮೂಲೆಗಳಲ್ಲಿ ಬಿಜೆಪಿ ನಾಯಕರು ಬೀದಿಗಿಳಿಯುತ್ತಿದ್ದರು. ಹಿಂದೂ ನಾಯಕರ ಬೆಂಕಿ ಹಚ್ಚೋ ಹೇಳಿಕೆಗಳು ಬರುತ್ತಿತ್ತು. ಆದರೆ ಈಗ ಬಿಜೆಪಿಯ ರಾಜ್ಯಾಧ್ಯಕ್ಷರಾಗ್ಲಿ, ಹಿಂದೂ ಹೆಸರಿನಲ್ಲಿ ಗೆದ್ದ ಒಬ್ಬ ಶಾಸಕನಾಗ್ಲಿ ತುಟಿ ಬಿಚ್ಚುತ್ತಿಲ್ಲ ಅಂದ್ರೆ ಅರ್ಥವೇನು
Discussion about this post