ಶಿರಸಿ ಅರಣ್ಯಶಾಸ್ತ್ರ ಕಾಲೇಜಿನ ತಜ್ಞರು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಸಲ್ಲಿಸಿರುವ ವರದಿ
ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ಬೆಳೆಸಿರುವ ತೇಗದ ಮರವನ್ನು ಎಷ್ಟು ವರ್ಷಕ್ಕೆ ಕತ್ತರಿಸಬೇಕು ಎಂಬ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಇಲಾಖೆ ಮರಮುಟ್ಟುಗಳಿಗಾಗಿಯೇ ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿ ತೇಗದ ಮರಗಳನ್ನು ಬೆಳೆಸಿರುತ್ತದೆ.
ಇದರ ಕತ್ರಾವಣೆ ೮೦ ವರ್ಷಕ್ಕೋ ಅಥವಾ ೧೨೦ ವರ್ಷಕ್ಕೋ ಎಂಬ ಬಗ್ಗೆ ಜಿಜ್ಞಾಸೆ ಇದೆ. ಈ ಹಿನ್ನೆಲೆಯಲ್ಲಿ ಎ.ಪಿ.ಸಿ.ಸಿ.ಎಫ್. ನೇತೃತ್ವದಲ್ಲಿ ಒಂದು ಸಮಿತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕಾರ್ಯೋಜನೆ, ಸಂಶೋಧನೆ ಹಾಗೂ ಶಿರಸಿ ಅರಣ್ಯಶಾಸ್ತ್ರ ಕಾಲೇಜಿನ ತಜ್ಞರು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಿರುತ್ತಾರೆ. ಆದಷ್ಟು ಶೀಘ್ರ ಇದನ್ನು ಪೂರ್ಣಗೊಳಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಅರಣ್ಯ ಸಚಿವರು ಹೇಳಿದ್ದಾರೆ.