ಕೊರೋನಾ ಅನ್ನುವ ಮಹಾಮಾರಿ ಬಂದ ಕಾರಣ ಅದಷ್ಟೋ ಮಂದಿಯ ಬದುಕು ಬೀದಿಗೆ ಬಿದ್ದಿದೆ. ಇದೇ ಮಹಾಮಾರಿಯ ಕಾರಣದಿಂದ ಕೆಲವರು ಸಿಕ್ಕಾಪಟ್ಟೆ ಕಾಸು ಹೊಡೆದಿದ್ದಾರೆ.
ಈ ನಡುವೆ ಕೊರೋನಾದೊಂದಿಗೆ ಜೀವಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಬೆನ್ನಲ್ಲೇ ಜನ ಅನಿವಾರ್ಯವಾಗಿ ರಸ್ತೆಗಿಳಿದಿದ್ದಾರೆ. ಒಂದ್ಸಲ ಕುಸಿದು ಹೋದ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಈ ನಡುವೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲೆ ಪ್ರಾರಂಭಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಶಾಲೆ ಪ್ರಾರಂಭಿಸಿದ್ರೆ ಹೇಗೆ ಅನ್ನುವುದನ್ನು ನೋಡಲು ಡೋಸ್ ಗಳನ್ನು ಬೇರೆ ಕೊಡುತ್ತಿದ್ದಾರೆ.
ಈಗ ಶಾಲೆ ಪ್ರಾರಂಭಿಸಲು ಬೇಕಾದ ಅನಿವಾರ್ಯತೆ ಇದೆ ಅನ್ನುವುದನ್ನು ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕರ ಉದಾಹರಣೆ ಕೊಡುವ ಮೂಲಕ ಮನವೊಲಿಸಲು ಮುಂದಾಗಿದ್ದಾರೆ.
ಶಾಲೆಗಳು ತೆರೆದಿಲ್ಲ ಅಂದ್ರೆ ಬಾಲ್ಯ ವಿವಾಹ ಹೆಚ್ಚಾಗುತ್ತದೆ, ಶಾಲೆಗಳಿಲ್ಲದ ಕಾರಣ ಪೋಷಕರು ಮಕ್ಕಳನ್ನು ಕೂಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಅನ್ನುವುದು ಶಿಕ್ಷಣ ಸಚಿವ ಕಾಳಜಿ. ಇರಬಹುದು, ಅದನ್ನು ಅಲ್ಲಗಳೆಯುವಂತಿಲ್ಲ, ಹಾಗಂತ ಕೊರೋನಾ ಅನ್ನುವ ಮಹಾಮಾರಿ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಶಾಲೆ ತೆರೆಯುವುದು ಎಷ್ಟರ ಮಟ್ಟಿಗೆ ಸರಿ.
ಬಾಲಕಾರ್ಮಿಕ ಹಾಗೂ ಬಾಲ್ಯ ವಿವಾಹ ಸಮಸ್ಯೆ ನಿವಾರಣೆಗೆ ಶಾಲೆ ತೆರೆಯುವುದು ಬಿಟ್ರೆ ಬೇರೆ ಪರಿಹಾರವೇ ಇಲ್ಲವೇ. ಅದರ ಬಗ್ಗೆ ಚರ್ಚೆ ನಡೆಯಲಿ.
ಇನ್ನು ಶಾಲೆಗಳನ್ನು ಪ್ರಾರಂಭಿಸುವ ಕುರಿತಂತೆ ಶಾಸಕರ ಸಲಹೆ ಕೇಳಿರುವುದು ಈ ವರ್ಷದ ಜೋಕ್ ಅಂದರೆ ತಪ್ಪಿಲ್ಲ. ಅರೇ ಶಾಲೆಗಳನ್ನು ತೆರೆಯುವ ಕುರಿತಂತೆ ಪೋಷಕರು ನಿರ್ಧರಿಸಬೇಕು, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆಯೇ ಇಲ್ಲವೋ ಅನ್ನುವುದನ್ನು ಅವರು ಹೇಳಬೇಕು.
ಹೋಗ್ಲಿ ಈ ಶಾಸಕರಿಗೆ ಪತ್ರ ಬರೆಯುವ ಬದಲು ಮೊನ್ನೆ ಸದನದಲ್ಲೇ ವಿಷಯ ಪ್ರಸ್ತಾಪಿಸಬಹುದಿತ್ತು ತಾನೇ. ಕೆಲಸಕ್ಕೆ ಬಾರದ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಬದಲು ಮಕ್ಕಳ ಭವಿಷ್ಯದ ಬಗ್ಗೆಯಾದರೂ ಚರ್ಚೆ ನಡೆಸಬಹುದಿತ್ತು. ಒಂದಿಷ್ಟು ಬುದ್ದಿವಂತ ವಿಚಾರವಂತ ಶಾಸಕರು ಒಳ್ಳೆ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದರು.
ಜೊತೆಗೆ ಅವರು ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವಂತಹ ವಾತಾವರಣವನ್ನು ಶಿಕ್ಷಣ ಇಲಾಖೆ ನಿರ್ಮಿಸಬೇಕು. ಯಸ್ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ್ರೆ ಕೊರೋನಾ ಬರುವುದಿಲ್ಲ ಅನ್ನುವುದು ಅವರಿಗೆ ಖಾತರಿಯಾಗಬೇಕು. ಇನ್ನು ಶಾಸಕರಿಗೇನು, ಅವರ ಹೈಕಮಾಂಡ್ ನಿಲುವು ಏನಿರುತ್ತದೋ ಅದನ್ನು ಹೇಳುತ್ತಾರೆ. ಶಾಸಕರ ಅಭಿಪ್ರಾಯಕ್ಕೆ ಬೆಲೆ ಇರುತ್ತಿದ್ರೆ ನಾವು ಎಲ್ಲೋ ಇರುತ್ತಿದೆವು.
Discussion about this post