ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಬಿಟಿವಿ ಎಂಡಿ ಜಿ.ಎಂ.ಕುಮಾರ್ ಗೆ ಸಂಕಷ್ಟ
ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣವನ್ನು ಮೂರನೇ ವ್ಯಕ್ತಿಗೆ ವರ್ಗಾವಣೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಶರಣಾಗುವಂತೆ ಬಿಟಿವಿ ವ್ಯವಸ್ಥಾಪಕ ನಿರ್ದೇಶಕ ಗಂಗಾಧರಪ್ಪ ಮುನೀಂದ್ರ ಕುಮಾರ್ ಅಲಿಯಾಸ್ ಜಿ.ಎಂ.ಕುಮಾರ್ ಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ..
ಮುನೀಂದ್ರ ಕುಮಾರ್ ಅಲಿಯಾಸ್ ಜಿ.ಎಂ.ಕುಮಾರ್ ಗೆಎರಡು ವಾರದೊಳಗೆ ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಪ್ರಕರಣ ಸಂಬಂಧ ಮುನೀಂದ್ರ ಕುಮಾರ್ ಅಲಿಯಾಸ್ ಜಿ.ಎಂ.ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧೂಲಿಯಾ ಹಾಗೂ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ಜಾಮೀನು ನೀಡಲು ನಿರಾಕರಿಸಿತು.
ಆರೋಪಿ 10 ಕೋಟಿಗೂ ಅಧಿಕ ಹಣವನ್ನು ದುರುಪಯೋಗಪಡಿಸಿಕೊಂಡು ವಂಚನೆ ನಡೆಸಿರುವುದರಿಂದ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಯ ಅಗತ್ಯವಿದೆ ಎಂದು ಪ್ರತಿವಾದಿ ವಕೀಲರು ಮಾಡಿದ ವಾದವನ್ನು ಎತ್ತಿ ಹಿಡಿದ ನ್ಯಾಯ ಪೀಠ ಅರ್ಜಿದಾರ ಜಿ.ಎಂ.ಕುಮಾರ್ ಗೆ ಶರಣಾಗಲು ಎರಡು ವಾರಗಳ ಕಾಲಾವಕಾಶ ನೀಡಿತು.
ಮೀಡಿಯಾ ಪ್ರೈವೇಟ್ ಲಿಮಿಟೆಡ್ನಿಂದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಡಿ ಜಿ.ಎಂ.ಕುಮಾರ್ ವಿರುದ್ಧ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ 2022 ದೂರು ದಾಖಲಾಗಿತ್ತು. ವಂಚನೆ ಆರೋಪಗಳ ಕುರಿತು ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಸಂಬಂಧ ಜಿ.ಎಂ.ಕುಮಾರ್ ನಿರೀಕ್ಷಣಾ ಜಾಮೀನು ಕೋರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ 2023ರಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ನಂತರ ಪೊಲೀಸರು ಆರೋಪಿಯನ್ನು 2023ರ ನವೆಂಬರ್ 25 ರಂದು ಬಂಧಿಸಿದ್ದರು.
ಈ ವೇಳೆ ಕೋರ್ಟ್ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರೂ ಅನಾರೋಗ್ಯದ ಕಾರಣ ನೀಡಿದ್ದ ಆರೋಪಿ ಜೈಲುವಾಸದ ಬದಲು ಆಸ್ಪತ್ರೆ ವಾಸ ನಡೆಸಿದ್ದ. ಈ ನಡುವೆ 2023ರ ಡಿಸೆಂಬರ್ ತಿಂಗಳಲ್ಲಿ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.