ಉಡುಪಿ : ಶೀರೂರು ಮಠ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು ನಿಜ, ಆದರೆ ಧಾರ್ಮಿಕವಾಗಿ ಮಠ ಅಧೋಗತಿಗೆ ಹೋಗಿತ್ತಾ ಅನ್ನುವ ಪ್ರಶ್ನೆಯೊಂದು ಶೀರೂರು ಶ್ರೀಗಳು ತೀರಿಕೊಂಡ ವೇಳೆ ಆಸ್ತಿಕರ ಮನಸ್ಸಿನಲ್ಲಿ ಮೂಡಿದ್ದು ಸುಳ್ಳಲ್ಲ.
ಇದೀಗ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಶೀರೂರು ಮಠದ ಸಲುವಾಗಿ ನಡೆಸುತ್ತಿರುವ ಕೆಲಸಗಳನ್ನು ನೋಡಿದರೆ, ಎರಡು ವರ್ಷಗಳ ಹಿಂದೆ ಆಸ್ತಿಕರ ಮನದಲ್ಲಿ ಮೂಡಿದ ಪ್ರಶ್ನೆಯಲ್ಲಿ ಸತ್ಯವಿದೆ ಅನ್ನುವಂತಿದೆ. ಇಲ್ಲವಾಗಿದ್ರೆ ಶೀರೂರು ಮಠದ ಸುಪರ್ದಿಯಲ್ಲೇ ಇದ್ದ ಗೋಪಾಲಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಗುಡಿಗೆ 15 ವರ್ಷಗಳಿಂದ ಪೂಜೆ ಸಲ್ಲಿಸದಿರಲು ಸಾಧ್ಯವೇ.
ಇದೀಗ ಶೀರೂರು ಮಠವನ್ನು ಆರ್ಥಿಕವಾಗಿ ಮಾತ್ರವಲ್ಲ ಧಾರ್ಮಿಕವಾಗಿಯೂ ಗಟ್ಟಿಗೊಳಿಸಲು ಮುಂದಾಗಿರುವ ಸೋದೆ ಶ್ರೀವಿಶ್ವವಲ್ಲಭತೀರ್ಥರು ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಉಡುಪಿ ತಾಲೂಕು ಬೈರಂಪಳ್ಳಿ ಗ್ರಾಮದ ಸಾಂತ್ಯಾರು ಶ್ರೀಗೋಪಾಲಕೃಷ್ಣ ಮತ್ತು ಶ್ರೀಮುಖ್ಯಪ್ರಾಣ ದೇವಸ್ಥಾನದ ಜೀರ್ಣೋದ್ಧಾರ.
ಸಾಂತ್ಯಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿ ಶ್ರೀಗೋಪಾಲಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಗುಡಿ ಹಿಂದೇ ಇತ್ತು. ಶೀರೂರು ಮಠದ ಆಡಳಿತಕ್ಕೆ ಒಳಪಟ್ಟಿದ್ದ ಮುಖ್ಯಪ್ರಾಣ ದೇವರ ಗುಡಿ ಸಂಪೂರ್ಣ ಜೀರ್ಣಾವಸ್ಥೆ ತಲುಪಿತ್ತು. ಅದೃಷ್ಟ ಅನ್ನುವಂತೆ ಆರೇಳು ವರ್ಷಗಳಿಂದ ಇಲ್ಲಿ ಕೇವಲ ದೀಪ ಹಚ್ಚುತ್ತಿದ್ದರು. ದುರಾದೃಷ್ಟ ಅಂದ್ರೆ ಈ ದೇವರಿಗೆ ಪೂಜೆಗಳಿಲ್ಲದೆ ಸುಮಾರು 15 ವರ್ಷಗಳೇ ಕಳೆದು ಹೋಗಿದೆ. ಈ ನಡುವೆ ಪೂಜೆಗಳಿಲ್ಲದ ಗೋಪಾಲಕೃಷ್ಣ ದೇವರ ಮೂರ್ತಿಯನ್ನು ಕಳ್ಳರು ಕದ್ದೊಯ್ದರು.
ಈ ನಡುವೆ ಶೀರೂರು ಶ್ರೀಗಳು ಅಕಾಲಿಕ ಮರಣಕ್ಕೆ ತುತ್ತಾದರು. ಮಠದ ಆಡಳಿತ ದ್ವಂದ ಮಠವಾದ ಸೋದೆ ಶ್ರೀಗಳ ಕೈಗೆ ಬಂತು. ಈ ವೇಳೆ ರಾಮನವಮಿ ಉತ್ಸವಕ್ಕೆಂದು ಶೀರೂರು ಮೂಲಮಠಕ್ಕೆ ಆಗಮಿಸಿದ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥರು ಸಾಂತ್ಯಾರಿಗೂ ಭೇಟಿ ಕೊಟ್ಟಿದ್ದರು. ದೇವರ ಗುಡಿಗೆ ಒದಗಿದ ಪರಿಸ್ಥಿತಿಯನ್ನು ಕಂಡು ಮರುಗಿದ ಶ್ರೀಗಳು ಅಂದೇ ಶಪಥವೊಂದನ್ನು ಕೈಗೊಂಡರು. ಅದುವೇ ದೇವಸ್ಥಾನದ ಜೀರ್ಣೋದ್ಧಾರ. ಅಂದರಂತೆ ಆಗ ಮಾಡಿದ ಸಂಕಲ್ಪ ಈಗ ನನಸಾಗಿದೆ.
ಕದ್ದೊಯ್ದ ಗೋಪಾಲಕೃಷ್ಣ ದೇವರ ವಿಗ್ರಹದ ಬದಲು ಶೀರೂರು ಮಠದಲ್ಲಿ ಪೂಜೆಗೊಳ್ಳುತ್ತಿರುವ ಗೋಪಾಲಕೃಷ್ಣ ದೇವರ ವಿಗ್ರಹವನ್ನು ತಂದು ಗರ್ಭಗುಡಿಯಲ್ಲಿ ಇರಿಸಲಾಗಿದೆ.
1.5 ಕೋಟಿ ವೆಚ್ಚದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೇವಲ 63 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಉಳಿದಂತೆ ಕರಸೇವೆಯ ಮೂಲಕವೇ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಮತ್ತೊಂದು ವಿಶೇಷ.
Discussion about this post