ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಕುರಿತಂತೆ ಮುಖ್ಯಮಂತ್ರಿ ಚರ್ಚೆ
ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದು, ನೇಮಕಾತಿ ಮಾಡಿಕೊಳ್ಳುವ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಈಗ ಆರೂ ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಮಕ್ಕಳು ಕೇವಲ ಮೊಟ್ಟೆ ತಿಂದರೆ ಸಾಲದು ವ್ಯಾಯಾಮ ಕೂಡ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ದೈಹಿಕ ಶಿಕ್ಷಕರ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಶಾಲೆಗಳಲ್ಲಿ ವಿಜ್ಞಾನ ಲ್ಯಾಬ್ಗಳನ್ನು ಮಾಡಲಾಗಿದ್ದು, ಇದರಿಂದ ೧೬ ಜಿಲ್ಲೆಗಳ ೨ ಸಾವಿರದ ೪೦೦ ಮಕ್ಕಳಿಗೆ ಅನುಕೂಲ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ೧ ಸಾವಿರದ ೮ ಎಲ್ಕೆಜಿ, ಯುಕೆಜಿ ಶಾಲೆ ಆರಂಭಿಸಲಾಗಿದ್ದು, ೧೩ ಸಾವಿರ ಶಿಕ್ಷಕರ ನೇಮಕಾತಿ ಆಗಿದೆ. ಅನುದಾನಿತ ಶಾಲೆಯಲ್ಲಿ ೬ ಸಾವಿರ ಶಿಕ್ಷಕರ ನೇಮಕಾತಿ ಆಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ೫ ಸಾವಿರದ ೮೦೦ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಸಂಪುಟದಲ್ಲಿ ಅನುಮತಿ ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ.