ಶೀರೂರು ಮಠಕ್ಕೆ ಇನ್ನೊಂದಿಷ್ಟು ದಿನ ಉತ್ತರಾಧಿಕಾರಿ ನೇಮಕವಾಗುವ ಸಾಧ್ಯತೆಗಳಿಲ್ಲ. ಬದಲಾಗಿ ಕಾದು ನೋಡುವ ತಂತ್ರಕ್ಕೆ ಉತ್ತರಾಧಿಕಾರಿ ನೇಮಕದ ಜವಾಬ್ದಾರಿ ಹೊತ್ತಿರುವ ದ್ವಂದ ಮಠದ ವಿಶ್ವವಲ್ಲಭ ತೀರ್ಥರು ನಿರ್ಧರಿಸಿದ್ದಾರೆ.
ಈ ಮೊದಲು ಚಾತುರ್ಮಾಸ ಪ್ರಾರಂಭವಾಗುವುದರೊಳಗೆ ಉತ್ತರಾಧಿಕಾರಿ ನೇಮಕವಾಗುವ ನಿರೀಕ್ಷೆ ಇತ್ತು. ಆದರೆ ಶ್ರೀಗಳ ಸಾವಿನ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಗೆ ಅಡ್ಡಿಯಾಗಬಾರದು ಎಂದು ಉತ್ತರಾಧಿಕಾರಿ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.ಶೀರೂರು ಮೂಲ ಮಠ ಪೊಲೀಸರ ಸುಪರ್ದಿಯಲ್ಲಿರುವುದೇ ಇದಕ್ಕೆ ಕಾರಣ.
ಇನ್ನು ಪೊಲೀಸ್ ತನಿಖೆ ಮುಕ್ತಾಯವಾದ ನಂತರ ಹಾದಿ ತಪ್ಪಿರುವ ಶೀರೂರು ಮಠದ ಆಡಳಿತ ವ್ಯವಸ್ಥೆ ಮತ್ತು ಪೂಜೆಯನ್ನು ಸರಿ ದಾರಿಗೆ ತರಬೇಕಾಗಿದೆ. ಉತ್ತರಾಧಿಕಾರಿ ನೇಮಕವಾದರೆ ಇದು ಕಷ್ಟ. ಇದು ಕೂಡಾ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ವಿಳಂಭಕ್ಕೆ ಕಾರಣ ಎನ್ನಲಾಗಿದೆ.
ಇನ್ನು ಉತ್ತರಾಧಿಕಾರಿಯಾಗುವವರಿಗೆ 18 ವರ್ಷ ತುಂಬಿರಬೇಕು, ಜಾತಕ ಕೂಡಿಬರಬೇಕು. ಶಾಸ್ತ್ರಾಭ್ಯಾಸ ಮಾಡಿರಬೇಕು. ಅಂಥವರು ಸಿಕ್ಕ ಬಳಿಕ ಅವರ ಪೂರ್ವಾಪರಗಳನ್ನು ತಿಳಿಯಬೇಕು. ಅಂತಹ ಯಾವ ವ್ಯಕ್ತಿಗಳು ಸೋದೆ ಶ್ರೀಗಳ ಗಮನಕ್ಕೆ ಬಂದಿಲ್ಲ.
ಚಾರ್ತುಮಾಸ ಸಂದರ್ಭದಲ್ಲಿ ಉತ್ತರಾಧಿಕಾರಿಯನ್ನು ಹುಡುಕಿಕೊಂಡು ಕೂರಲು ಅಷ್ಟ ಮಠಕ್ಕೆ ಸಮಯವಿಲ್ಲ. ಹೀಗಾಗಿ ಚಾರ್ತುಮಾಸ ಮುಗಿಯುವ ತನಕ ಉತ್ತರಾಧಿಕಾರಿ ನೇಮಕ ಪ್ರಸ್ತಾಪವಾಗುವುದಿಲ್ಲ.
ಚಾರ್ತುಮಾಸ ಮುಗಿದ ಮೇಲೂ ಸಾಕಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿದೆ. ಅಷ್ಟು ಹೊತ್ತಿಗೆ ಪೊಲೀಸ್ ತನಿಖೆ ಒಂದು ಹಂತಕ್ಕೆ ಬಂದಿರುತ್ತದೆ. ಮಠದೊಳಗಿನ ರಹಸ್ಯ, ಪಟ್ಟದರಸಿಯ ಕಾಟ, ಆಸ್ತಿ ಪಾಸ್ತಿಯಲ್ಲಿ ಕೈಯಾಡಿಸಿದವರ ವಿವರ ಬಹಿರಂಗವಾಗಿರುತ್ತದೆ.
ಇನ್ನು ಆ ತನಕ ಶಿರೂರು ಮಠ ಮತ್ತು ಮೂಲ ಮಠದ ಉಸ್ತುವಾರಿ ನೋಡಿಕೊಳ್ಳಲು 5 ಮಂದಿಯ ಸಮಿತಿ ನೇಮಕವಾಗಲಿದೆ. ಸಮಿತಿ ಶೀರೂರು ಮಠದಲ್ಲಿ ಇದ್ದ ಆಸ್ತಿ, ಕರಗಿದ ಆಸ್ತಿ, ಯಾರು ಏನೇನೂ ಮಾಡಿದರೂ ಅನ್ನುವ ಮಾಹಿತಿ ಕಲೆ ಹಾಕಲಿದೆ.
Discussion about this post