ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ಅರ್ಧ ಗಂಟೆಯಲ್ಲಿ ತರಾತುರಿಯಲ್ಲಿ ಕಾಂಗ್ರೆಸ್-ಜೆಡಿಎಸ್ನವರು ಸರ್ಕಾರ ರಚನೆ ಮಾಡಿದ್ದರು. ಅವರಿಗೆ ಯಾವ ಸ್ಪಷ್ಟನೆಯೂ ಇರಲಿಲ್ಲ. ಇದು ಜನರಿಗೆ ನಿರಾಶೆ ಉಂಟುಮಾಡಿತು. ಸರ್ಕಾರ ರಚಿಸಿದ ಮೇಲೂ ಜನರ ಕಷ್ಟ ಸುಖಗಳಿಗೆ ಅವರು ಸ್ಪಂದಿಸಲಿಲ್ಲ. ಜನರ ಮನಸ್ಸಿನಲ್ಲಿ ಕುದಿಯುತ್ತಿದ್ದ ಭಾವನೆಗಳಿಗೆ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಮುನಿರತ್ನ ಸ್ಪಷ್ಟ ರೂಪ ಕೊಟ್ಟರು ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಹೇಳಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿಂದು ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರವಾಗಿ ಪ್ರಚಾರ ನಡೆಸಿದ ಅವರು, ಗೊತ್ತುಗುರಿ ಇಲ್ಲದ ಮೈತ್ರಿ ಸರ್ಕಾರವನ್ನು ಕಿತ್ತು ಹಾಕಿ ಬಿಜೆಪಿ ಸರ್ಕಾರ ತನ್ನಿ ಎಂದು ಕಾಂಗ್ರೆಸ್ನ ಶಾಸಕರು ತಮ್ಮನ್ನು ಭೇಟಿಯಾಗಲು ಬಂದಾಗಲೆಲ್ಲಾ ಹೇಳುತ್ತಿದ್ದೆ. ನನ್ನ ಮಾತಿಗೂ ಕಿಮ್ಮತ್ತು ಕೊಟ್ಟು ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ತಂದಿದ್ದಾರೆ. ಅದಕ್ಕೆ ನನಗೆ ಸಂತೋಷವಾಗಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ಜೆಡಿಎಸ್ ಮರು ಮೈತ್ರಿ ಬಗ್ಗೆ ಮಾತನಾಡಿದ ಎಸ್ ಎಂ ಕೃಷ್ಣ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿದೆ ಅನಿಸುತ್ತಿಲ್ಲ. ಸಿದ್ದರಾಮಯ್ಯ ಒಂದು ದಿಕ್ಕು, ಕುಮಾರಸ್ವಾಮಿ ಇನ್ನೊಂದು ದಿಕ್ಕು, ದೇವೇಗೌಡರು ಮತ್ತೊಂದು ದಿಕ್ಕಿನಲ್ಲಿದ್ದಾರೆ. ಹೀಗಾಗಿ ಅವರೊಳಗೆ ಒಪ್ಪಂದ ನಡೆದಿದೆ ಅನಿಸುತ್ತಿಲ್ಲ ಎಂದು ಹೇಳಿದರು.
Discussion about this post