ಬೆಂಗಳೂರು : ಚೈನಾ ಹುಟ್ಟು ಹಾಕಿದ ಕೊರೋನಾ ವೈರಸ್ ಇಡೀ ವಿಶ್ವವನ್ನು ಕಂಗಾಲು ಮಾಡಿದೆ. ಅದರಲ್ಲೂ ಭಾರತದಲ್ಲಿ ಬೀಸುತ್ತಿರುವ ಎರಡನೆ ಅಲೆ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಬೆಚ್ಚಿ ಬೀಳಿಸಿದೆ. ಎರಡನೇ ಅಲೆ ಹೋದರೆ ಸಾಕಪ್ಪ ಎಂದು ದೇಶ ಪ್ರಾರ್ಥಿಸುತ್ತಿರುವ ನಡುವೆ ಮೂರನೇ ಅಲೆಯ ಸ್ವರೂಪ ಹೇಗಿರುತ್ತದೋ ಅನ್ನುವ ಭೀತಿ ಶುರುವಾಗಿದೆ.
ಈ ನಡುವೆ ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಅಮೆರಿಕಾ ಫೈಜರ್ ಲಸಿಕೆ ರಾಮಬಾಣದಂತೆ ಕೆಲಸ ಮಾಡಿದೆ. ಇದೇ ಲಸಿಕೆಯ ಕಾರಣದಿಂದ ಅಮೇರಿಕಾ ಹಾಗೂ ಇಸ್ರೇಲ್ ಮಾಸ್ಕ್ ಕಿತ್ತು ಹಾಕೋ ಆಂದೋಲನ ಪ್ರಾರಂಭಿಸಿದೆ. ಸೋಂಕಿನ ಮತ್ಯಾವುದೇ ಅಲೆ ಬೀಸಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳುವ ಸ್ಥಿತಿಯಲ್ಲಿ ಆ ರಾಷ್ಟ್ರಗಳಿಲ್ಲ.
ಹಾಗಿದ್ದರೂ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಲಸಿಕೆ ನೀಡುವ ದೊಡ್ಡ ಸವಾಲಿನ ಕೆಲಸವಾಗಿದೆ. ದೇಶದ ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸುವಲ್ಲಿ ಅದ್ಯಾವ ರಾಷ್ಟ್ರಗಳು ಯಶಸ್ವಿಯಾಗಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚು ಮಂದಿಯನ್ನು ತಲುಪಲಾಗದು ಅನ್ನುವುದೇ ಲಸಿಕೆ ವಿತರಣೆಯ ಹಿನ್ನಡೆಗೆ ಕಾರಣವಾಗಿದೆ. ಲಸಿಕೆ ಹಾಕಿದರೂ ಕೂಡಾ ಅದು ಇಂತಿಷ್ಟು ಅವಧಿಯ ತನಕ ಮಾತ್ರ ಕೆಲಸ ಮಾಡುತ್ತದೆ. ಒಂದು ವರ್ಷದ ಒಳಗಾಗಿ ಮತ್ತೆ ಲಸಿಕೆ ಹಾಕಬೇಕಾದ ಪ್ರಮೇಯ ಬಂದರೂ ಅಚ್ಚರಿ ಇಲ್ಲ.
ಮುಂದಿನ ದಿನಗಳಲ್ಲಿ ಕೊರೋನಾ ಅನ್ನುವುದು ಉಳಿದೆಲ್ಲಾ ವೈರಲ್ ಜ್ವರಗಳಂತೆ ನಮ್ಮ ನಿಮ್ಮ ನಡುವೆ ಉಳಿಯುವ ಸಾಧ್ಯತೆಗಳಿದೆ. ಹೀಗಾಗಿಯೇ ಕೊರೋನಾ ಮಣಿಸುವ ನಿಟ್ಟಿನಲ್ಲಿ ಫೈಜರ್ ಕಂಪನಿ ಟ್ಯಾಬ್ಲೆಟ್ ಒಂದನ್ನು ಸಂಶೋಧಿಸಿದೆ.
ಅಮೆರಿಕಾ ಹಾಗೂ ಬೆಲ್ಜಿಯಂನಲ್ಲಿ ಈ ಮಾತ್ರೆಯ ಕ್ಲಿನಿಕಲ್ ಟ್ರಯಲ್ ನಡೆದಿದ್ದು, ಪ್ರಾಥಮಿಕ ಹಂತದ ವರದಿಗಳು ಆಶಾದಾಯಕ ಅನ್ನಿಸಿಕೊಂಡಿದೆ. ವಿವಿಧ ವಯಸ್ಸಿನ ಒಟ್ಟು 60 ಜನರ ಮೇಲೆ ಈ ಮಾತ್ರೆಯ ಪ್ರಯೋಗ ನಡೆದಿದ್ದು, ಅಂತಿಮ ವರದಿ ಸಕ್ಸಸ್ ಎಂದು ಬಂದರೆ ಈ ವರ್ಷದ ಅಂತ್ಯಕ್ಕೆ ಫೈಜರ್ ಸಂಸ್ಥೆಯ ಕೊರೋನಾ ಟ್ಯಾಬ್ಲೆಟ್ ಮಾರುಕಟ್ಟೆಗೆ ಬರಲಿದೆ.
ಈ ನಡುವೆ ಫೈಜರ್ ಟ್ಯಾಬ್ಲೆಟ್ ಸಂಶೋಧನೆಯ ಕುರಿತಂತೆ ಮಾತನಾಡಿರುವ ಫೈಜರ್ ಸಂಸ್ಥೆಯ ಸಿಇಓ ಆಲ್ಬರ್ಟ್ ಬೌರ್ಲ, ಸಂಶೋಧನೆ ಯಶಸ್ವಿಯಾದರೆ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ಸಿಗಲಿದೆ ಅಂದಿದ್ದಾರೆ.
ಜೊತೆಗೆ ಭಾರತದ ಪ್ರಸ್ತುತ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಭಾರತದ ಸ್ಥಿತಿ ಚಿಂತಾಜನಕವಾಗಿದೆ. ಈ ಸಾಂಕ್ರಾಮಿಕ ಕಾಯಿಲೆಯಿಂದ ನಮ್ಮ ನೆರೆ ರಾಷ್ಟ್ರವನ್ನು ರಕ್ಷಿಸಲೇಬೇಕಾಗಿದೆ. ಭಾರತ ಮತ್ತು ಆಫ್ರಿಕಾದಲ್ಲಿ ಅಬ್ಬರಿಸುತ್ತಿರುವ ಸೋಂಕಿಗೆ ಬ್ರೇಕ್ ಹಾಕದಿದ್ರೆ, ಮತ್ತಷ್ಟು ರೂಪಾಂತರಿ ವೈರಸ್ ಗಳು ಹುಟ್ಟಿಕೊಳ್ಳುವ ಸಾಧ್ಯತೆಗಳಿದೆ ಅಂದಿದ್ದಾರೆ.
Discussion about this post