ಬೆಂಗಳೂರು : ಕೊರೋನಾ ಸೋಂಕಿನ ಅಬ್ಬರದ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿದೆ. ಒಂದು ಕಡೆ ಯಡಿಯೂರಪ್ಪ ಅವರನ್ನು ಇಳಿಸುವ ಪ್ರಯತ್ನಗಳು ನಡೆಯುತ್ತಿದೆ. ಜೊತೆಗೆ ಮೂಲ ಬಿಜೆಪಿಗರು, ವಲಸೆ ಬಿಜೆಪಿಗರು, ಪಕ್ಷ ನಿಷ್ಟರು, ಯಡಿಯೂರಪ್ಪ ನಿಷ್ಟರು ಅನ್ನುವ ಗುಂಪುಗಳು ರಚನೆಯಾಗಿದೆ.
ಹಾಗಂತ ಈ ಗುಂಪುಗಾರಿಕೆ ಕೇವಲ ಬಿಜೆಪಿಗೆ ಸೀಮಿತವಲ್ಲ ಕಾಂಗ್ರೆಸ್ ನಲ್ಲೂ ವಲಸಿಗರು, ಮೂಲ ಕಾಂಗ್ರೆಸ್ ಅನ್ನುವ ಗುಂಪುಗಳಿದೆ. ಜೊತೆಗೆ ಸಿದ್ದರಾಮಯ್ಯ ನಿಷ್ಠರು, ಡಿಕೆಶಿ ನಿಷ್ಠರು ಅನ್ನುವ ಬಣಗಳು ಕೂಡಾ ಇದೆ.
ಈಗಾಗಲೇ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಬಗ್ಗೆ ರಾಜ್ಯ ಕಾಂಗ್ರೆಸ್ ರಣತಂತ್ರಗಳನ್ನು ರೂಪಿಸುತ್ತಿದೆ. ಆದರೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕೋ, ಡಿಕೆಶಿ ಆಗಬೇಕೋ ಅನ್ನುವ ಗೊಂದಲದಿಂದ ರಣತಂತ್ರಗಳು ಜಾರಿಯಾಗುತ್ತಿಲ್ಲ. ಹಾಗಂತ ಅವರಿಬ್ಬರೂ ಮುಖ್ಯಮಂತ್ರಿ ಪಟ್ಟದೆಡೆಗಿನ ಓಟವನ್ನು ನಿಲ್ಲಿಸಿಲ್ಲ.
ಇದೇ ಕಾರಣದಿಂದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಮುಂದುವರಿದ ಭಾಗವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿರುವ ಸಿದ್ದರಾಮಯ್ಯ ಬಿರುಸಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಮೈಸೂರು ಮೇಯರ್ ಚುನಾವಣೆ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಜೊತೆ ಚರ್ಚೆ ನಡೆಸಿರುವ ಸಿದ್ದರಾಮಯ್ಯ, ಸ್ಥಳೀಯ ರಾಜಕೀಯ ಪರಿಸ್ಥಿತಿ ಬಗ್ಗೆ ತನಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನೇ ಓವರ್ ಟೇಕ್ ಮಾಡಿರುವ ಸಿದ್ದರಾಮಯ್ಯ, ಕಳೆದ ಚುನಾವಣೆಯಲ್ಲಿ ಆಗಿರುವ ತಪ್ಪುಗಳು ಆಗೋದು ಬೇಡ, ಮೇಯರ್ ಸ್ಥಾನ ಕಾಂಗ್ರೆಸ್ ಗೆ ಸಿಗುವುದಾದ್ರೆ ಮಾತ್ರ ಜೆಡಿಎಸ್ ಜೊತೆ ಮೈತ್ರಿ, ಒಂದು ವೇಳೆ ಅದಕ್ಕೆ ಜೆಡಿಎಸ್ ಸಿದ್ದವಿಲ್ಲ ಅನ್ನುವುದಾದರೆ ಮೈತ್ರಿಯೇ ಬೇಡ ಎಂದು ಸಿದ್ದರಾಮಯ್ಯ ಸೂಚಿಸಿದ್ದಾರಂತೆ.
ಕಳೆದ ಬಾರಿ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ತನ್ವೀರ್ ಸೇಠ್ ಕಾರಣದಿಂದ ಮೇಯರ್ ಸ್ಥಾನ ಜೆಡಿಎಸ್ ಪಾಲಾಗಿತ್ತು. ಇದು ಸಿದ್ದರಾಮಯ್ಯ ಆಕ್ರೋಶಕ್ಕೂ ಕಾರಣವಾಗಿತ್ತು. ಬಳಿಕ ತನಿಖೆ, ನೋಟಿಸ್, ವಿಚಾರಣೆ, ಕ್ರಮ ಅನ್ನುವ ಹೇಳಿಕೆಗಳು ಬಂದಿತ್ತು. ಆದರೆ ಏನೂ ಆಗಿರಲಿಲ್ಲ.
Discussion about this post