ನೈತಿಕ ಹೊಣೆ ಹೊತ್ತು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಎಫ್ಐಆರ್ ದಾಖಲಿಸಲು ಸೂಚಿಸುತ್ತಿದ್ದಂತೆಯೇ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಎರಡೂ ನ್ಯಾಯಾಲಯಗಳ ತೀರ್ಪುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿತಸ್ಥರು ಎನ್ನುವುದಕ್ಕೆ ಪೂರಕವಾಗಿದ್ದು, ರಾಜೀನಾಮೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದ ನೈತಿಕ ರಾಜಕಾರಣದ ಪರಂಪರೆಯ ಘನತೆ ಕುಗ್ಗದಂತೆ ನಡೆದುಕೊಳ್ಳಿ ಎಂದು ತಿಳಿಸಿದ್ದಾರೆ.
ಈ ನಡುವೆ ಮುಡಾ ಹಗರಣದಲ್ಲಿ ರಾಜ್ಯ ಹೈಕೋರ್ಟ್ ತೀರ್ಪನ್ನು ಗೌರವಿಸಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿಜಯಪುರ ಜಿಲ್ಲಾ ಬಿಜೆಪಿ ಘಟಕದಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಮುಡಾನಲ್ಲಿ ಅಕ್ರಮವಾಗಿ 14 ಸೈಟ್ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆಗೆ ಉತ್ತರ ಕೊಡದೆ ಪಲಾಯನ ಮಾಡಿದರು. ರಾಮಕೃಷ್ಣ ಹೆಗಡೆ,ದೇವೇಗೌಡ, ಪಟೇಲ್ ಅವರಂತಹ ಮೌಲ್ಯಯುತ ರಾಜಕಾರಣಿಗಳ ಸಂಸ್ಕಾರದಲ್ಲಿ ಬೆಳೆದ ಸಿದ್ಧರಾಮಯ್ಯ ನಿಮಗೆ ಇಂತಹ ಘಟನೆ ಶೋಭೆ ತರುವುದಿಲ್ಲ.
ಆದ್ದರಿಂದ ನೈತಿಕ ಹೊಣೆ ಹೊತ್ತು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿ ಪದವಿ ನಿಮ್ಮ ಅಥವಾ ಕಾಂಗ್ರೆಸ್ ನ ಆಸ್ತಿ ಅಲ್ಲ. ಅದು ರಾಜ್ಯದ 7 ಕೋಟಿ ಕನ್ನಡಿಗರ ಜನರ ಸೇವೆಗೆ ಇರುವ ಅವಕಾಶ. ಪ್ರತಿ ಸಲ ನಮಗೆ 136 ಸ್ಥಾನ ಬಂದಿವೆ ಎನ್ನುವ ಕಾಂಗ್ರಸ್ಸಿಗರು ಅಷ್ಟು ಬಹುಮತ ಬಂದರೆ ನೀವು ಮಾಡಿದ ತಪ್ಪನ್ನು ಕ್ಣಮಿಸಬೇಕೆ, ರಾಜ್ಯಪಾಲರ ವಿರುದ್ಧ ಮಾತನಾಡಿ ದಬ್ಬಾಳಿಕೆ ಮಾಡಿದ್ದೀರಿ, ಆದರೆ ಹೈಕೋರ್ಟ್ ರಾಜ್ಯಪಾಲರ ನಿರ್ಣಯವನ್ನು ಎತ್ತಿ ಹಿಡಿದಿದೆ. 30 ಗಂಟೆಗಳ ಕಾಲ ವಾದ-ವಿದಾದ ನಡೆದು ತಾವು ಪಡೆದ ಸೈಟಗಳು ಅಕ್ರಮ ಎಂದು ತನಿಖೆ ಆದೇಶಿಸಿದೆ ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.