ಅಂದು ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಸಂಘಟನೆ ಮಾಡಿದ ಕಾರಣಕ್ಕೆ ಜೆಡಿಎಸ್ ಇಂದು ಕೂಡಾ ಉಸಿರಾಡುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಮತ್ತು ತಂಡ ಕೆಲಸ ಮಾಡದಿರುತ್ತಿದ್ದರೆ ಕುಮಾರಸ್ವಾಮಿಗೆ ಸಿಎಂ ಭಾಗ್ಯ ಒಲಿದು ಬರುತ್ತಿರಲಿಲ್ಲ.
ದುರಂತ ಅಂದರೆ ಜೆಡಿಎಸ್ ಈಗ ಆಗಿನಂತೆ ಪ್ರಾದೇಶಿಕ ಪಕ್ಷವಾಗಿ ಉಳಿದಿಲ್ಲ. ಬದಲಾಗಿ ಅದೊಂದು ಕುಟುಂಬ ಮತ್ತು ಒಂದೇ ಜಾತಿಗೆ ಸೀಮಿತವಾದ ಪಕ್ಷದಂತೆ ಕಾಣಿಸುತ್ತಿದೆ. ಕುಟುಂಬ ರಾಜಕಾರಣವನ್ನು ಸಿಕ್ಕಾಪಟ್ಟೆ ಅಪ್ಪಿಕೊಂಡ ಕಾರಣಕ್ಕೆ ಕುಮಾರಸ್ವಾಮಿಯಂತಹ ಪ್ರತಿಭಾವಂತ ನಾಯಕನಿಗೂ ಅಧಿಕಾರದ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕುಮಾರಸ್ವಾಮಿಯಂತಹ ಉತ್ತಮ ನಾಯಕನಿದ್ದರೂ ರೇವಣ್ಣನಂತಹ ಸೂಪರ್ ಸಿಎಂ ಕಾರಣಕ್ಕೆ ಜನ ಜೆಡಿಎಸ್ ಗೆ ಪೂರ್ಣ ಪ್ರಮಾಣದಲ್ಲಿ ಬಹುಮತ ಕೊಡಲು ಹಿಂಜರಿಯುತ್ತಿದ್ದಾರೆ. ಜೊತೆಗೆ ಈ ಬಾರಿ ಬಹುಮತ ಬಾರದಿದ್ದರೆ ಮತ್ತೆ ಜನಾದೇಶಕ್ಕೆ ಹೋಗ್ತಿವಿ ಎಂದು ಮೈತ್ರಿ ಸರ್ಕಾರಕ್ಕೆ ಮುಂದಾಗೋದು, ನಮ್ಮ ಕುಟುಂಬದಿಂದ ಈ ಬಾರಿ ಇಬ್ಬರೇ ಚುನಾವಣೆಗೆ ನಿಲ್ಲೋದು ಅಂತಾ ಹೇಳಿ ಉಪ ಚುನಾವಣೆಯಲ್ಲಿ ಪತ್ನಿಯನ್ನು ಕಣಕ್ಕಿಳಿಸುವಂತಹ ಎಡವಟ್ಟುಗಳು ಕುಮಾರಸ್ವಾಮಿಯ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸುವಂತೆ ಮಾಡಿದೆ.
ಕುಮಾರಸ್ವಾಮಿ ಉತ್ತಮ ನಾಯಕ ನಿಜ, ಆದರೆ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಅವರು ವಿಫಲರಾಗಿದ್ದೇ ಹೆಚ್ಚು. ಮಾತೃ ಹೃದಯ ಅವರಲ್ಲಿದೆ ಆದರೆ ಅವರ ಸುತ್ತ ಮುತ್ತ ತುಂಬಿರುವ ಮಂದಿ ಹಾದಿ ತಪ್ಪಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಈ ಬಾರಿ ಅವರ ಸುತ್ತವಿದ್ದ ಮಂದಿ.
ಇಷ್ಟೆಲ್ಲಾ ಪೀಠಿಕೆ ಯಾಕಂದ್ರೆ ಇದೇ ಕುಮಾರಸ್ವಾಮಿ ಹಿಂದೊಮ್ಮೆ ಸಿದ್ದರಾಮಯ್ಯ ಸಿಎಂ ಆಗಿರುವುದನ್ನು ತಪ್ಪಿಸಿದ್ದರು. ಆದರೆ ಅದೇ ಸಿದ್ದರಾಮಯ್ಯ ಕುಮಾರಸ್ವಾಮಿ ಸಿಎಂ ಆಗುವುದನ್ನು ತಪ್ಪಿಸಲಿಲ್ಲ, ಆದರೆ ಸಿಕ್ಕ ಸಿಎಂ ಪದವಿಯನ್ನು ಉಳಿಸಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಾಗಲಿಲ್ಲ.
ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ತಾನೇ ಸಿಎಂ ಪದವಿ ತಪ್ಪಿಸಿದ್ದೇನೆ ಎಂದು ಸದನದಲ್ಲೇ ಕುಮಾರಸ್ವಾಮಿ ಒಪ್ಪಿಕೊಂಡಿದ್ದರು. ಆದರೆ ಸಿದ್ದರಾಮಯ್ಯ ಸಿಎಂ ಆಗುವುದನ್ನು ತಪ್ಪಿಸಲು ಕಾರಣವೇನು ಅನ್ನುವುದು ಯಕ್ಷ ಪ್ರಶ್ನೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಬೆಳೆಯುವುದು ದಳಪತಿಗಳಿಗೆ ಬೇಕಿರಲಿಲ್ಲ ಅನ್ನುವುದು ಸ್ಪಷ್ಟ. ನಾಯಕನನ್ನು ಬೆಳೆಸಲಾಗದವರು ಅದ್ಯಾವ ಸೀಮೆ ನಾಯಕರು.
ಇಂದು ಈ ಸಂಬಂಧ ಮಾತನಾಡಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿ ತಪ್ಪಿದ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಹೇಗೆ ತಮಗೆ ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸಿದರು ಎಂದು ಸಿದ್ದರಾಮಯ್ಯಎಳೆಎಳೆಯಾಗಿ ಬಿಡಿಸಿದ್ದಾರೆ.
2004ರಲ್ಲಿಶರದ್ ಪವಾರ್ ಮನೆಯಲ್ಲಿ ಸಭೆ ನಡೆಯಿತು. ಅಲ್ಲಿ ದೇವೇಗೌಡರು ಸೇರಿದಂತೆ ನಾವು ಹಾಜರಿದ್ದೆವು. ಆಗ ಖುದ್ದು ಶರದ್ ಪವಾರ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಕೇಳುವಂತೆ ಸಲಹೆ ನೀಡಿದರು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಸೋನಿಯಾ ಗಾಂಧಿ ಅವರು ಒಪ್ಪಿಕೊಂಡಿದ್ದಾರೆ ಎಂದು ದೇವೇಗೌಡರ ಎದುರಲ್ಲೇ ಶರದ್ ಪವಾರ್ ಹೇಳಿದ್ದರು. ಆದರೆ ದೇವೇಗೌಡರು ನಮಗೆ ಡೆಪ್ಯೂಟಿ ಸಿಎಂ ಸಾಕು ಎಂದು ಹೇಳಿದರು. ನನ್ನ ಎದುರಲ್ಲೇ ಮುಖ್ಯಮಂತ್ರಿ ಸ್ಥಾನ ಬೇಡ ಎಂದು ಹೇಳಿದರು. ಈ ವಿಚಾರವಾಗಿ ದೇವೇಗೌಡರಲ್ಲಿ ಕಾರಣ ಕೇಳಿದಾಗ, ಎಸ್ಎಂ ಕೃಷ್ಣ ಅವರ ಮೇಲೆ ನಾವು ಚಾರ್ಚ್ಶೀಟ್ ಹಾಕಿದ್ದೇವೆ. ಹಾಗಾಗಿ ನಾವು ಸಿಎಂ ಸ್ಥಾನ ತಗೊಂಡ್ರೆ ಅದನ್ನೆಲ್ಲಾ ಡಿಫೆಂಡ್ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ನಮಗೆ ಉಪಮುಖ್ಯಮಂತ್ರಿ ಸ್ಥಾನವೇ ಸಾಕು ಎಂದಿದ್ದಾಗಿ ಸಿದ್ದರಾಮಯ್ಯ ಅಂದಿನ ಘಟನೆಯನ್ನು ಬಿಡಿಸಿಟ್ಟಿದ್ದಾರೆ.
ಅಂದು ತಮಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ನಾವೇ ಎಂದು ಕುಮಾರಸ್ವಾಮಿ ಅಸೆಂಬ್ಲಿಯಲ್ಲಿ ಸತ್ಯ ಒಪ್ಪಿಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದನ್ನೆಲ್ಲಾ ಸಹಿಸಿಕೊಳ್ಳಬೇಕಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
Discussion about this post