ಬೆಂಗಳೂರು : ಮಾಜಿ ಹಾಗೂ ಹಾಲಿ ಸಿಎಂ ನಡುವೆ ಟ್ವೀಟ್ ವಾರ್ ಮುಂದುವರಿದಿದ್ದು, ಮೊನ್ನೆಯಷ್ಟೇ ಸಿದ್ದರಾಮಯ್ಯ ಅವರಿಗೆ ಖಡಕ್ಕ್ ಉತ್ತರ ಕೊಟ್ಟಿದ್ದರು. ಬೊಮ್ಮಾಯಿ ಕೊಟ್ಟಿದ್ದ ತಿರುಗೇಟು ಸಿಕ್ಕಾಪಟ್ಟೆ ವೈರಲ್ ಕೂಡಾ ಆಗಿತ್ತು. ಇದೀಗ ಈ ಟ್ವೀಟ್ ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಕಾನೂನು ಕ್ರಮ ಎಚ್ಚರಿಕೆ ನೀಡಿದ್ದಾರೆ.
ನೈತಿಕ ಪೊಲೀಸ್ ಗಿರಿ ಕುರಿತಂತೆ ಪ್ರತಿಕ್ರಿಯಿಸಿದ್ದ ಸಿಎಂ ಬೊಮ್ಮಾಯಿ, ಕ್ರಿಯೆಗೆ ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ ಅಂದಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಬೊಮ್ಮಾಯಿ, ಆಡಳಿತ ಪಾಠ ನಿಮ್ಮಿಂದ ಕಲಿಯಬೇಕಿಲ್ಲ. ನೀವು ಸಿಎಂ ಆಗಿದ್ದಾಗ ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿ ಮಾಡಿದ್ದಂತೆ ಹಿಂದೂ ಕಾರ್ಯಕರ್ತರನ್ನು ಸಾಯಿಸುವ ಮೂಲಕ ಹಿಂದೂ ವಿರೋಧಿಗಳ ‘ಐಕಾನ್’ ಆಗಿದ್ದೀರಿ. ಪೊಲೀಸ್ ಅಥವಾ ಆಡಳಿತ ಪಾಠವನ್ನು ನಾನು ನಿಮ್ಮಿಂದ ಕಲಿಯಬೇಕಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಮ್ಮಲ್ಲಿ ಸಮರ್ಥ ಪೊಲೀಸ್ ಪಡೆ ಇದೆ ಅಂದಿದ್ದರು.
ಜೊತೆಗೆ ನಿಮ್ಮ ಆಡಳಿತದಲ್ಲಿ ‘ಜಂಗಲ್ ರಾಜ್’ ನಿರ್ಮಾಣವಾಗಿತ್ತು. ಹಿಂದೂಗಳ ಹತ್ಯೆ ವೇಳೆ ನೀವು ಕುರುಡ, ಕಿವುಡ ಮತ್ತು ಮೂಕರಾಗಿದ್ದೀರಿ. ನನ್ನ ಆಡಳಿತದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ನಿಮ್ಮ ಜಂಗಲ್ ರಾಜ್ನಲ್ಲಿ ಹಿಂದೂಗಳನ್ನು ಕೊಲ್ಲಲಾಯಿತು ಮತ್ತು ಅನೇಕ ಗಲಭೆಗಳು ನಡೆದವು ಎಂದು ಗಂಭೀರ ಆರೋಪ ಮಾಡಿದ್ದರು.
ಇದೀಗ ಇದೀಗ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವುದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿತ್ತು. ಆದರೆ, ಮುಖ್ಯಮಂತ್ರಿಯವರು ಕಿರಿಯರಿರುವ ಕಾರಣದಿಂದ ತಿದ್ದಿಕೊಳ್ಳಲಿ ಎಂಬ ಕಾರಣಕ್ಕಾಗಿ ಪ್ರತಿಕ್ರಿಯೆಯನ್ನಷ್ಟೇ ನೀಡುತ್ತಿದ್ದೇನೆ ಅಂದಿದ್ದಾರೆ.
ನನ್ನ ಸರ್ಕಾರದ ಕಾಲದಲ್ಲಿ ನೂರಾರು ಹಿಂದೂಗಳ ಹತ್ಯೆಯಾಯಿತು ಎಂದು ಕಾಗಕ್ಕ- ಗುಬ್ಬಕ್ಕನ ಕತೆ ಹೇಳುತ್ತಾ ಕೂರಬೇಡಿ. ನೀವು ಗೃಹ ಸಚಿವರಾಗಿದ್ದವರು, ಈಗ ಮುಖ್ಯಮಂತ್ರಿ ಆಗಿದ್ದೀರಿ. ನಾವೇ ಪ್ರಕಟಿಸಿದ ಅಧಿಕೃತ ಮಾಹಿತಿಯನ್ನು ಕೊಡುತ್ತೇನೆ. ತನಿಖೆ ಮಾಡಿ ಜನರಿಗೆ ಸತ್ಯವನ್ನು ತಿಳಿಸಿ ಎಂದು ಆಗ್ರಹಿಸಿರುವ ಸಿದ್ದರಾಮಯ್ಯ , 2013-18ರ ಅವಧಿಯಲ್ಲಿ ಕೋಮು ಸಂಘರ್ಷದಲ್ಲಿ ಹತ್ಯೆಗೀಡಾದ 10 ಹಿಂದೂಗಳ ಸಾವು ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಯ ಸದಸ್ಯರಿಂದ ನಡೆದಿದೆ. 11 ಮುಸ್ಲಿಮರು ಮತ್ತು 10 ಹಿಂದೂಗಳ ಸಾವಿಗೆ ಬಜರಂಗ ದಳ ಮತ್ತು ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಕಾರಣ ಅಂದಿದ್ದಾರೆ.
Discussion about this post